
NEW DELHI : ರಾಜಧಾನಿ ದೆಹಲಿಯ ಹಲವಾರು ಶಾಲೆಗಳಿಗೆ ಇಂದು ಮುಂಜಾನೆ ಬಾಂಬ್ ಬೆದರಿಕೆ ಕರೆಗಳು ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಯನ್ನು ಆವರಣದಿಂದ ಹೊರಗೆ ಕಳುಹಿಸಿ, ತಪಾಸಣಾ ಕಾರ್ಯಗಳನ್ನು ನಡೆಸಲಾಗಿದೆ. ಡಿಪಿಎಸ್ ದ್ವಾರಕಾ (DPS Dwarka), ಕೃಷ್ಣ ಮಾಡೆಲ್ ಪಬ್ಲಿಕ್ ಶಾಲೆ (Krishna Model Public School), ಹಾಗೂ ಹಲವು ಸರ್ವೋದಯ ವಿದ್ಯಾಲಯಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
ಬೆಳಗ್ಗೆಯೇ ಬಂದ ಈ ಬೆದರಿಕೆ ಕರೆಗಳನ್ನು ಗಂಭೀರವಾಗಿ ಪರಿಗಣಿಸಿದ ಶಾಲಾ ಆಡಳಿತ ಮಂಡಳಿಗಳು ತಕ್ಷಣವೇ ವಿದ್ಯಾರ್ಥಿಗಳನ್ನು ಭದ್ರತೆಗಾಗಿ ಹೊರಗೆ ಕಳುಹಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳಗಳು ತಕ್ಷಣ ಕಾರ್ಯಪ್ರವೃತ್ತವಾಗಿ ಶಾಲಾ ಆವರಣಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಈ ವರೆಗೆ ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
“ಆತ್ಮೀಯ ಪೋಷಕರೇ, ಅನಿವಾರ್ಯ ಕಾರಣಗಳಿಂದಾಗಿ ಸೆಪ್ಟೆಂಬರ್ 20 ರಂದು ಶಾಲೆ ಮುಚ್ಚಲ್ಪಡುತ್ತದೆ. ಎಲ್ಲಾ ಶಾಲಾ ಬಸ್ಗಳು, ಖಾಸಗಿ ವ್ಯಾನ್ಗಳು ಹಾಗೂ ಕ್ಯಾಬ್ಗಳು ತಕ್ಷಣ ಹಿಂತಿರುಗಿಸಲಾಗುತ್ತಿದೆ. ಪೋಷ ಕರು ತಮ್ಮ ಮಕ್ಕಳನ್ನು ನಿಲ್ದಾಣಗಳಲ್ಲಿ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಂತೆ ವಿನಂತಿಸಲಾಗಿದೆ,” ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ಇನ್ನುಇಂದು ನಿಗದಿಪಡಿಸಿದ್ದ ಮಧ್ಯಂತರ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಹೊಸ ದಿನಾಂಕ ಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಇಂತಹ ಬೆದರಿಕೆಗಳು ಕಳೆದ ಕೆಲ ತಿಂಗಳಿಂದ ನಿರಂತರವಾಗಿಯೇ ಸಂಭವಿಸುತ್ತಿವೆ. ಸೆಪ್ಟೆಂಬರ್ 9ರಂದು ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ಗೆ ಬಂದ ಇಮೇಲ್ ಬೆದರಿಕೆ ಬಳಿಕ, ಅದೇ ದಿನ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಹಾಗೂ ದೆಹಲಿ ಮುಖ್ಯಮಂತ್ರಿ ಕಾರ್ಯಾಲಯಕ್ಕೂ ಬೆದರಿ ಕೆಗಳು ಬಂದಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ ದೆಹಲಿಯ ಡಿಸಿಪಿ ನಿಧಿನ್ ವಲ್ಸನ್, “ಇಮೇಲ್ ಮುಖಾಂತರ ಬಂದಿರುವ ಬೆದರಿಕೆ ಭವಿಷ್ಯದಲ್ಲಿ ಸಂಭವನೀಯ ಸ್ಫೋಟದ ಆತಂಕವನ್ನು ಎಬ್ಬಿಸುತ್ತಿದೆ. ಆದರೂ ಪ್ರಸ್ತುತ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ತನಿಖೆ ಮುಂದುವರಿದಿದೆ,” ಎಂದು ತಿಳಿಸಿದ್ದಾರೆ.





