
SIRA : ಶಿರಾ ತಾಲ್ಲೂಕಿನ ತಾವರೆಕೆರೆ ಅಂಗನವಾಡಿ ಕೇಂದ್ರದ 1ರಲ್ಲಿ ಮೇಲ್ವಿಚಾರಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಅವರು ಭಾಗ್ಯಲಕ್ಷ್ಮಿ ಹಣದ ಪಾಸ್ ಪುಸ್ತಕ ನೀಡಲು ಫಲಾನುಭವಿಯಿಂದ ಲಂಚ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಭಾಗ್ಯಲಕ್ಷ್ಮಿ ಯೋಜನೆಯಡಿ 2006- 07ನೇ ಸಾಲಿನಲ್ಲಿ ಬಾಂಡ್ ಮಾಡಿಸಿದ ಹೆಣ್ಣು ಮಕ್ಕಳ ಬಾಂಡ್ಗೆ 18 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಫಲಾನುಭವಿಗಳಿಗೆ ಹಣವನ್ನು ಡಿಬಿಟಿ ಮೂಲಕ ಕಳುಹಿಸುತ್ತಿದ್ದು, ಈಗಾಗಲೇ ಹಲವಾರು ಮಂದಿಗೆ ಹಣ ರವಾನೆಯಾಗಿದೆ. ಉಳಿದವರಿಗೂ ಹಂತ- ಹಂತವಾಗಿ ಹಣ ಸಿಗಲಿದೆ.
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸುವ ನಿಟ್ಟಿನಲ್ಲಿ 2006-07ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ‘ಭಾಗ್ಯಲಕ್ಷ್ಮಿ’ ಯೋಜನೆಯನ್ನು ಜಾರಿಗೆ ತಂದರು. ಈಗ 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ಮಾಡಿಸಿದ್ದ ಹೆಣ್ಣು ಮಗುವಿನ ಬಾಂಡ್ಗೆ 18 ವರ್ಷ ತುಂಬಿದ್ದು, ಫಲಾನುಭವಿಗಳಿಗೆ ಹಣ ನೀಡಲಾಗುತ್ತದೆ. ಆದರೆ ಅಂಗನವಾಡಿ ಅಧಿಕಾರಿಗಳು ಹಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಮಕ್ಕಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಯಾವ ಉದ್ದೇಶಕ್ಕಾಗಿ ಅವರು ಹಣವನ್ನು ಪಡೆಯುತ್ತಿದ್ದಾರೆ ಅನ್ನೋ ವಿಚಾರ ಅಧಿಕಾರಿಗಳಿಂದ ತನಿಖೆಯಾಗಬೇಕಿದೆ.




