Pralhad Joshi : ರೈತರ ಹಿತವನ್ನು ಕಾಪಾಡಲು, ರೈತರ ಸಬಲೀಕರಣಕ್ಕೆ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಯಾವಾಗಲೂ ಬದ್ಧವಾಗಿದೆ.

ಕಬ್ಬು ಬೆಳೆಗಾರರ ಹಿತಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪ್ರತಿಯಾಗಿ ಪ್ರಲ್ಹಾದ್ ಜೋಶಿ ಸಿಎಂಗೆ ಪತ್ರ
ಕರ್ನಾಟಕದಲ್ಲಿ ಕಬ್ಬು ಬೆಲೆ ಹೆಚ್ಚಳಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ಪ್ರಲ್ಹಾದ್ ಜೋಶಿ ಸಿಎಂಗೆ ಪತ್ರ ಬರೆದು, ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಇದನ್ನು ಓದಿ : Bengaluru : ಸಿಮೆಂಟ್ ಮಿಕ್ಸರ್ ಲಾರಿ ಎಡವಟ್ಟಿಗೆ ಗೋಡೆ ಕುಸಿತ – ಮಗು ಸಾವು
ಪ್ರಲ್ಹಾದ್ ಜೋಶಿ ಎಕ್ಸ್ ಸಂದೇಶ

“ಮೋದಿ ಸರ್ಕಾರದ ಅವಧಿಯಲ್ಲಿ ಕಬ್ಬಿನ ಫೇರ್ ಅಂಡ್ ರಿಮ್ಯುನರೇಟಿವ್ ಪ್ರೈಸ್ (FRP) ನಿರಂತರವಾಗಿ ಹೆಚ್ಚಳವಾಗಿದೆ. 2013-14ರಲ್ಲಿ ಕ್ವಿಂಟಲ್ಗೆ ₹210 ಇದ್ದ FRP, 2025-26ರ ಸಕ್ಕರೆ ಹಂಗಾಮಿನಲ್ಲಿ ₹355ಕ್ಕೆ ಏರಿಕೆಯಾಗಿದೆ.
ಇದು ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ.105 ರಿಂದ 112ರಷ್ಟು ಲಾಭ ಒದಗಿಸುತ್ತದೆ. ಇದು ಲಾಭದಾಯಕತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುತ್ತದೆ ಎಂದು ಜೋಶಿ ಉಲ್ಲೇಖಿಸಿದ್ದಾರೆ.
ಅವರು ಮುಂದುವರೆದು, 1966ರ ಕಬ್ಬು ನಿಯಂತ್ರಣ ಆದೇಶದ ಪ್ರಕಾರ ಸಕ್ಕರೆ ಕಾರ್ಖಾನೆಗಳು 14 ದಿನಗಳ ಒಳಗೆ ಪಾವತಿ ಮಾಡಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಹೇಳಿದ್ದಾರೆ.

ಕೇಂದ್ರ ಕೈಗೊಂಡ ಪ್ರಮುಖ ಕ್ರಮಗಳು
- 2014-15ರಿಂದ 2020-21ರವರೆಗೆ ₹16,500 ಕೋಟಿ ರೂ. ಹಣವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿದೆ, ಇದರಿಂದ ರೈತರ ಬಾಕಿ ಪಾವತಿಗೆ ಸಹಾಯವಾಗಿದೆ.
- ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ: ಹೆಚ್ಚುವರಿ ಕಬ್ಬು ಎಥೆನಾಲ್ ತಯಾರಿಕೆಗೆ ಬಳಸಲು ಅವಕಾಶ. ಕರ್ನಾಟಕದಲ್ಲಿ ಎಥೆನಾಲ್ ಹಂಚಿಕೆ 2022-23ರಲ್ಲಿ 85 ಕೋಟಿ ಲೀಟರ್ನಿಂದ 2025-26ಕ್ಕೆ 133 ಕೋಟಿ ಲೀಟರ್ ಆಗಲಿದೆ. ಈ ಉದ್ದೇಶಕ್ಕಾಗಿ ₹435.42 ಕೋಟಿ ಅನುದಾನ ಮಂಜೂರಾಗಿದೆ.
- ಸಕ್ಕರೆ ರಫ್ತು ನೀತಿ: ಎಕ್ಸ್-ಮಿಲ್ ಬೆಲೆ ಕುಸಿದಾಗ 10 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಅನುಮತಿ ನೀಡಲಾಗಿದೆ, ಇದರಿಂದ ಪ್ರತಿ ಕ್ವಿಂಟಲ್ಗೆ ಬೆಲೆ ₹3,370ರಿಂದ ₹3,930ಕ್ಕೆ ಏರಿಕೆಯಾಗಿದೆ.
ಕೇಂದ್ರದ ಈ ಕ್ರಮಗಳಿಂದ ಕರ್ನಾಟಕ ಸೇರಿ ದೇಶದಾದ್ಯಂತ ಕಬ್ಬಿನ ಬಾಕಿ ಪಾವತಿ ಸ್ಥಿತಿ ಬಹಳ ಸುಧಾರಿಸಿದೆ. 2022-23 ಮತ್ತು 2023-24 ಹಂಗಾಮಿಗೆ ಯಾವುದೇ ಬಾಕಿ ಇಲ್ಲ. 2024-25 ಹಂಗಾಮಿಗೆ ಕೇವಲ 50 ಲಕ್ಷ ರೂ. ಬಾಕಿ ಇದೆ (2025 ಸೆಪ್ಟೆಂಬರ್ 30ರವರೆಗೆ) ಎಂದು ಜೋಶಿ ಪತ್ರದಲ್ಲಿ ತಿಳಿಸಿದ್ದಾರೆ.
“ಎಥೆನಾಲ್ ಮತ್ತು ರಫ್ತು ನೀತಿಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯ ಸಿಕ್ಕಿದ್ದು, ರೈತರಿಗೆ ಸಮಯಕ್ಕೆ ಪಾವತಿ ಖಚಿತವಾಗಿದೆ,” ಎಂದು ಪ್ರಲ್ಹಾದ್ ಜೋಶಿ ಉತ್ತರಿಸಿದ್ದಾರೆ.

ಇದನ್ನು ನೋಡಿ : ತನಗಿಂತ 2 ವರ್ಷ ಚಿಕ್ಕವನ ಪ್ರೇಮದ ಬಲೆಗೆ ಬಿದ್ದಿದ್ದ ಯುವತಿ ದುರಂತ ಸಾವು, ಆಗಿದ್ದೇನು?




