
ಶಿರಾ :
ಶಿರಾದ ಅತ್ಯಾಧುನಿಕ ಕುರಿ-ಮೇಕೆ ವಧಾಗಾರ ಕಾರ್ಯಾರಂಭ ಶೀಘ್ರದಲ್ಲೇ ಮಾಂಸ ರಫ್ತಿಗೆ ಉತ್ತೇಜನ ಶಾಸಕರು ತಿಳಿಸಿದ್ರು. ಕೊನೆಗೂ ರಾಜ್ಯದ ಅತ್ಯಾಧುನಿಕ ಕುರಿ -ಮೇಕೆ ವಧಾಗಾರ ಕಾರ್ಯಾರಂಭದ ಸುಳಿವು ಸಿಕ್ಕಿದ್ದು, ಏಳು -ಏಟು ವರ್ಷಗಳ ಬಳಿಕ ಕಾರ್ಯಾರಂಭ ಮಾಡುತ್ತಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ 20 ಎಕರೆ ಜಾಗದಲ್ಲಿ ಈ ಅತ್ಯಾಧುನಿಕ ವಧಾಗಾರ ನಿರ್ಮಾಣವಾಗಿದೆ. ಉದ್ಘಾಟನೆಗೆ ಎರಡು ಮೂರು ಬಾರಿ ಅಡೆತಡೆ ಇತ್ತು. ಸದ್ಯ ಇಂದು ಪ್ರಾಯೋಗಿಕವಾಗಿ ಚಾಲನೆ ದೊರೆಯಿತು. ಕುರಿ ಮತ್ತು ಮೇಕೆ ಮಾಂಸ ರಫ್ತನ್ನು ಈ ವಧಾಗಾರ ಉತ್ತೇಜಿಸಲಿದ್ದು, ಸ್ಥಳೀಯರಿಗೆ ಒಂದಿಷ್ಟು ಉದ್ಯೋಗ ಅವಕಾಶ ನೀಡುವ ಸಾಧ್ಯತೆಯೂ ಇದೆ.
ಕುರಿ ಮತ್ತು ಮೇಕೆ ಮಾಂಸ ರಫ್ತನ್ನು ಈ ವಧಾಗಾರ ಉತ್ತೇಜಿಸಲಿದೆ. ಆದರೆ, ಸ್ಥಳೀಯರನ್ನೇ ಉದ್ಯಮಾಧಿಪತಿಗಳನ್ನಾಗಿ ಮಾಡಬೇಕು. ಕನಿಷ್ಠ ಉದ್ಯೋಗವಕಾಶವನ್ನಾದರೂ ಸ್ಥಳೀಯರಿಗೆ ಕಲ್ಪಿಸಿ ಎಂಬ ಒತ್ತಾಯ ಕೇಳಿಬಂದಿದೆ. 2017ರಲ್ಲಿ ಅನುಮೋದನೆ ಚೀಲನಹಳ್ಳಿಯಲ್ಲಿ ವಧಾಗಾರ ನಿರ್ಮಾಣಕ್ಕೆ 2017ರಲ್ಲೇ ಸಚಿವ ಸಂಪುಟದ ಅನುಮೋದನೆ ಸಿಕ್ಕಿತ್ತು. ಗುರುತಿಸಲಾಗಿದ್ದ ಜಾಗದಲ್ಲಿ ಯೋಜನೆ ಪೂರ್ಣಗೊಂಡಿದ್ದು, ಪಿಪಿಪಿ ಮಾದರಿಯಲ್ಲಿ ಹೊರರಾಜ್ಯದ ಗುತ್ತಿಗೆದಾರರೊಬ್ಬರಿಗೆ ವಧಾಗಾರ ನೀಡಲಾಗಿತ್ತು.
ದಿನಕ್ಕೆ ಕನಿಷ್ಠ 1,500 ಕುರಿ ಅಥವಾ ಮೇಕೆ ಯಂತ್ರಕ್ಕೆ ಬೇಕು. ಇಲ್ಲಿ ಮಾಂಸವನ್ನು ಸಂಸ್ಕರಣೆ ಮಾಡಿ, ಸಂಗ್ರಹ ಮಾಡುವ ವ್ಯವಸ್ಥೆ ಇದೆ. ಸಮರ್ಪಕವಾಗಿ ಪ್ಯಾಕ್ ಮಾಡಿ ರಫ್ತು ಮಾಡಲಾಗುತ್ತದೆ. ಇದರಿಂದ ಉದ್ಯಮದ ಏಳ್ಗೆಯಾಗುತ್ತದೆ. ಕುರಿ – ಮೇಕೆ ಸಾಕಾಣಿಕೆದಾರರ ಬದುಕು ಹಸನಾಗುತ್ತದೆ. ತುಮಕೂರು ಜಿಲ್ಲೆಯ ತುಮಕೂರು, ಶಿರಾ, ಮಧುಗಿರಿ, ಕೊರಟಗೆರೆ ಹಾಗೂ ಚಿತ್ರದುರ್ಗದ ಹಿರಿಯೂರು, ಹೊಸದುರ್ಗ ಹಾಗೂ ಚಿತ್ರದುರ್ಗ ಭಾಗದ ಸಾಕಾಣಿಕೆದಾರರಿಗೆ ಬಹಳ ಅನುಕೂಲವಾಗಲಿದೆ ಎಂಬ ಉದ್ದೇಶ ವನ್ನು ಶಾಸಕ ಟಿ.ಬಿ. ಜಯಚಂದ್ರ ಹೊಂದಿದ್ದರು. ಆದರೆ, 2018ರ ಚುನಾವಣೆಯಲ್ಲಿ ಪರಾಜಯಗೊಂಡಿದ್ದರಿಂದ ಅವರ ಚಿಂತನೆಯೂ ನನೆಗುದಿಗೆ ಬಿದ್ದಿತು. ಈಗ ಅವರು ಪುನಃ ಚುನಾಯಿತರಾಗಿದ್ದಾರೆ. ಕಳೆದ ವಾರ ಅಧಿಕಾರಿಗಳು ಜೊತೆಗೆ ಭೇಟಿ ನೀಡಿ ಕಾರ್ಯಾರಂಭದ ಬಗ್ಗೆ ತಿಳಿಸಿದ್ದರು.
ಅದರಂತೆ ಇಂದು ತಾವರೆಕೆರೆ ಬಳಿಯ ಚೀಲನಹಳ್ಳಿ ಬಳಿ ಅತ್ಯಾಧುನಿಕ ತಂತ್ರಜ್ಞಾನದ ಕುರಿ ಮತ್ತು ಮೇಕೆ ಸಂಸ್ಕರಣೆ ಘಟಕ ನಿರ್ಮಾಣವಾಗಿದೆ. ಸುಮಾರು 100 ಕುರಿ ಮತ್ತು ಮೇಕೆಗಳ ಮಾಂಸವನ್ನು ವೈದ್ಯಕೀಯ ಪರೀಕ್ಷೆ ಮತ್ತು ವೈಜ್ಞಾನಿಕ ರೀತಿಯಲ್ಲಿ ಕಟಾವು ಮಾಡಿ ಸಂಸ್ಕರಣೆ ಮಾಡುವ ಐತಿಹಾಸಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪಶು ಸಂಗೋಪನೆ ಇಲಾಖೆ ನಿರ್ದೇಶಕ ಗೋ.ಮು ನಾಗರಾಜ್, ತಾಲ್ಲೂಕು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಸಂಪತ್ ಕುಮಾರ್, ಮಾಜಿ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್ ,ಪಶು ವೈದ್ಯಾಧಿಕಾರಿ ಡಾ.ವಾಸಂತಿ,ಡಾ.ನಳಿನಾಕ್ಷಿ ಬಲರಾಂ, ಪ್ರತಾಪ್ ಮೀಟ್ ವರ್ಕ್ ಮಾಲೀಕರಾದ ಅಭಿಷೇಕ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ರು.




