
ಕರ್ನಾಟಕ ಲಿಂಗಾಯಿತ ಮಠಾಧೀಶರ ಒಕ್ಕೂಟದಿಂದ ಬಸವಣ್ಣನವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಲು, ಸೆಪ್ಟೆಂಬರ್ 1ರಿಂದ 30ರವರೆಗೆ ಬಸವ ಸಂಸ್ಕೃತಿ ಜಾಗೃತಿ ಅಭಿಯಾನ ನಡೆಯುತ್ತಿದೆ. ಇದರ ಅಂಗವಾಗಿ ಜಾಥಾ ಸೆಪ್ಟೆಂಬರ್ 27ರಂದು ಬೆಳಗ್ಗೆ 10:30ಕ್ಕೆ ತುಮಕೂರು ನಗರಕ್ಕೆ ಆಗಮಿಸಲಿದೆ ಎಂದು ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಶ್ರೀ ಶ್ರೀ ಶ್ರೀ ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿ ತಿಳಿಸಿದ್ರು.
ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಗೌರವಾಧ್ಯಕ್ಷರಾಗಿದ್ದಾರೆ. ಗುಬ್ಬಿ ತಾಲೂಕು ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು ಅಧ್ಯಕ್ಷರಾಗಿದ್ದು, ಅಂದು ಇಡೀ ದಿನ ಸಾರ್ವಜನಿಕ ಸಭೆ, ವಿದ್ಯಾರ್ಥಿಗಳೊಂದಿಗೆ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಜಾಥಾ ಅಭಿಯಾನಕ್ಕೆ ಪೂರ್ವಭಾವಿಯಾಗಿ 18 ಸೆಪ್ಟೆಂಬರ್ನಂದು ತಿಪಟೂರು ಕೆರಗೋಡಿ ಶ್ರೀಗಳಿಂದ ಚಾಲನೆ ದೊರೆತಿದೆ. 19 ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚನ್ನಪ್ಪನಪಾಳ್ಯ,ದಾಸೀಹಳ್ಳಿ, ಅಬೂಜಿಹಳ್ಳಿ,ನಂತರ ತಮ್ಮಡಿಹಳ್ಳಿಯ ಮಠದಲ್ಲಿ ವಾಸ್ತವ್ಯ ಆಗಲಿದ್ದು , 20 ರಂದು ಕುಪ್ಪೂರು, ಮತಿಘಟ್ಟ, ಹಂದನಕೆರೆ, ಎಣ್ಣೆಗೆರೆ, ಯಳನಡು ಮುಂತಾದ ಹಳ್ಳಿಗಳಲ್ಲಿ ಸಂಚರಿಸಲಿದೆ. 21 ರಂದು ಕೆಂಕೆರೆ, ಹುಳಿಯಾರು, ನಂದಿಹಳ್ಳಿ, ಮುದ್ದೇನಹಳ್ಳಿ, ನವಿಲೇ, ಅಣೆಕಟ್ಟೆ ಕಡೆಗೆ ಮೆರವಣಿಗೆ ನಡೆಯಲಿದೆ. 22 ರಂದು ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಆಗಮಿಸಿ ನಂತರ ತುರುವೇಕೆರೆಗೆ ಪಯಣಿಸುತ್ತದೆ.




