Renuka Swamy : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರ ವಿರುದ್ಧ ದಾಖಲಾಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆ ನಡೆದಿದೆ.
ಇನ್ನು ಈ ಪ್ರಕರಣದ 14ನೇ ಆರೋಪಿ ಪ್ರದೋಶ್ ಅವರಿಗೆ ನ್ಯಾಯಾಲಯವು 20 ದಿನಗಳ ಮಧ್ಯಂತರ ಜಾಮೀನು ನೀಡಿದೆ.
ಸುಪ್ರೀಂಕೋರ್ಟ್ನ ತೀರ್ಪಿನ ನಂತರ ಹೊಸ ಬೆಳವಣಿಗೆ
ಈ ವರ್ಷದ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ತೀರ್ಪು ನೀಡಿತ್ತು. ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನೂ ಏಳು ಆರೋಪಿಗಳ ಜಾಮೀನುಗಳನ್ನು ರದ್ದುಪಡಿಸಿ, ಅವರನ್ನು ಮತ್ತೆ ಜೈಲಿಗೆ ಕಳುಹಿಸಿತ್ತು. ಆ ನಂತರದಿಂದ ಆರೋಪಿಗಳು ಮತ್ತೆ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಿರಲಿಲ್ಲ.
ಪ್ರದೋಶ್ ತಂದೆಯ ನಿಧನದ ಹಿನ್ನೆಲೆ ಮಧ್ಯಂತರ ಜಾಮೀನು
ಆದರೆ ಇದೀಗ, ಪ್ರದೋಶ್ ಅವರ ತಂದೆ ಸುಬ್ಬಾರಾವ್ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ, ಅವರ ಉತ್ತರಾಧಿ ಕ್ರಿಯೆಗಳಲ್ಲಿ ಭಾಗವಹಿಸಲು ಪ್ರದೋಶ್ ಪರ ವಕೀಲರು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಾನವೀಯ ನೆಲೆಗಟ್ಟಿನಲ್ಲಿ ನ್ಯಾಯಾಲಯವು 20 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೆಲ ದಿನಗಳ ಹಿಂದೆ ಪ್ರದೋಶ್ ಅವರ ಅಜ್ಜಿಯೂ ನಿಧನರಾಗಿದ್ದರೆಂದು ಮೂಲಗಳು ತಿಳಿಸಿವೆ.
ಪ್ರದೋಶ್ ವಿರುದ್ಧ ಗಂಭೀರ ಆರೋಪಗಳು
ಪ್ರದೋಶ್ ಅವರು ಈ ಪ್ರಕರಣದ 14ನೇ ಆರೋಪಿ ಆಗಿದ್ದಾರೆ. ಘಟನೆ ನಡೆದ ದಿನದಂದು ಅವರು ನಟ ದರ್ಶನ್ ಜೊತೆ ಇದ್ದರು ಎನ್ನಲಾಗಿದೆ. ದರ್ಶನ್ ಅವರಿಂದ ₹30 ಲಕ್ಷ ರೂಪಾಯಿ ಹಣ ಪಡೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪವೂ ಇದೆ.
ಬೆಂಗಳೂರಿನ ಸ್ಟೋನಿ ಬ್ರೂಕ್ ಹೋಟೆಲ್ ಪ್ರದೋಶ್ ಅವರ ಸ್ವತ್ತಾಗಿದ್ದು, ಅಲ್ಲಿ ರೇಣುಕಾ ಸ್ವಾಮಿ ಅಪಹರಣ ಮತ್ತು ಕೊಲೆ ಸಂಚು ರೂಪಿಸಲಾಯಿತು ಎಂಬ ಆರೋಪ ತನಿಖಾ ಅಧಿಕಾರಿಗಳಿಂದ ಕೇಳಿಬಂದಿದೆ.
ಇದನ್ನು ಓದಿ : ದಿನಸಿ ಅಂಗಡಿಯಲ್ಲಿ ಬೆಂಕಿ ಅವಘಡ – ಸುಟ್ಟು ಕರಕಲಾದ ವಸ್ತುಗಳು

ಹಣದ ವ್ಯವಹಾರ ಮತ್ತು ಸಾಕ್ಷ್ಯ ನಾಶದ ಸಂಚು
ದರ್ಶನ್ ಅವರಿಂದ ಹಣ ಪಡೆದು ಪ್ರದೋಶ್ ನಕಲಿ ಆರೋಪಿಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ರೇಣುಕಾ ಸ್ವಾಮಿಯ ಶವದ ಸಾಗಾಟ ಮತ್ತು ವಿಲೇವಾರಿ ಯಲ್ಲಿಯೂ ಪ್ರದೋಶ್ ಪಾತ್ರ ಇತ್ತು ಎನ್ನಲಾಗಿದೆ. ಇನ್ನು ತನಿಖೆ ದಿಕ್ಕು ತಪ್ಪಿಸಲು ಪ್ರದೋಶ್ ಹಲವು ರೀತಿಯ ಪ್ರಯತ್ನಗಳನ್ನು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೆಯೂ ಇದೇ ರೀತಿಯ ಮಾನವೀಯ ಜಾಮೀನು
ಈ ಹಿಂದೆ, ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಅನುಕುಮಾರ್ ಅವರ ತಂದೆ ನಿಧನರಾದಾಗ, ಅವರಿಗೂ ನ್ಯಾಯಾಲಯ ಮಾನವೀಯ ನೆಲೆಗಟ್ಟಿನಲ್ಲಿ ಅಂತಿಮಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು.
ಈಗ ಪ್ರದೋಶ್ ಅವರಿಗೂ ಅದೇ ರೀತಿಯಲ್ಲಿ ತಾತ್ಕಾಲಿಕ ಜಾಮೀನು ನೀಡಲಾಗಿದೆ. ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ತೀವ್ರ ತನಿಖೆ ಮುಂದುವರಿದಿರುವ ಸಂದರ್ಭದಲ್ಲೇ ಪ್ರದೋಶ್ಗೆ ತಾತ್ಕಾಲಿಕ ಜಾಮೀನು ಸಿಕ್ಕಿದೆ.
ನ್ಯಾಯಾಲಯದ ಮಾನವೀಯ ತೀರ್ಪು ತನಿಖೆಯ ದಿಕ್ಕಿನಲ್ಲಿ ಯಾವುದೇ ಬದಲಾವಣೆಗೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಇದನ್ನು ನೋಡಿ : ರೇಣುಕಾ ಸ್ವಾಮಿ ಕೊಲೆ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು




