Fire Accident : ಭೀಕರ ಅಗ್ನಿ ಅವಘಡವೊಂದು ನಡೆದಿದ್ದು, ಬನಶಂಕರಿಯ ಬ್ಯಾಂಕ್ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

ಬೆಂಗಳೂರು ನಗರದ ಬನಶಂಕರಿಯ ಬ್ಯಾಂಕ್ ಕಾಲೋನಿಯಲ್ಲಿರುವ ಧನಲಕ್ಷ್ಮಿ ಡಿಪಾರ್ಟ್ಮೆಂಟಲ್ ಸ್ಟೋರ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆ ನೆನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ.
ರಾತ್ರಿ ವೇಳೆಯ ಬೆಂಕಿ ಅನಾಹುತ
ಮಾಲೀಕ ಶಂಭುಶೆಟ್ಟಿ ಅವರು ರಾತ್ರಿ 10.30ಕ್ಕೆ ಅಂಗಡಿ ಮುಚ್ಚಿದ ನಂತರ ಸುಮಾರು ಅರ್ಧ ಗಂಟೆಯೊಳಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಎಣ್ಣೆ ಮತ್ತು ತುಪ್ಪದಿಂದ ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ
ಅಂಗಡಿಯಲ್ಲಿ ಅಡುಗೆ ಎಣ್ಣೆ, ತುಪ್ಪ ಹಾಗೂ ಇತರ ದಹನೀಯ ವಸ್ತುಗಳು ಇದ್ದ ಕಾರಣ, ಬೆಂಕಿ ತೀವ್ರವಾಗಿ ಹಬ್ಬಿದೆ. ಕ್ಷಣಾರ್ಧದಲ್ಲಿ ಇಡೀ ಅಂಗಡಿ ಹೊತ್ತಿ ಉರಿದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಇದನ್ನು ಓದಿ : ಹೋಂ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು
ಯುಪಿಎಸ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡ ಶಂಕೆ
ದ್ವಿತೀಯ ಅಂತಸ್ತಿನ ಕಟ್ಟಡದಲ್ಲಿದ್ದ ಅಂಗಡಿಯಲ್ಲಿ ಯುಪಿಎಸ್ ಸ್ಫೋಟವೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಗ್ರೌಂಡ್ ಫ್ಲೋರ್ನಿಂದ ಪ್ರಾರಂಭವಾದ ಬೆಂಕಿ ಮೊದಲ ಮಹಡಿಯವರೆಗೆ ಹಬ್ಬಿದ್ದು, ಕಟ್ಟಡದ ಬಹುಭಾಗ ಕರಕಲಾಗಿದೆ.

ಅಗ್ನಿಶಾಮಕ ದಳದ ಕಾರ್ಯಾಚರಣೆ ಮುಂದುವರಿದಿದೆ
ಇನ್ನು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ನಷ್ಟದ ಪ್ರಮಾಣವನ್ನು ಅಂದಾಜಿಸಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಮುಂಬೈಯ ಜೋಗೇಶ್ವರಿ ಪ್ರದೇಶದಲ್ಲಿಯೂ ಅಗ್ನಿ ಅವಘಡ
ಪ್ರತ್ಯೇಕ ಘಟನೆಯಲ್ಲಿ, ಮುಂಬೈನ ಜೋಗೇಶ್ವರಿ ಪ್ರದೇಶದಲ್ಲಿರುವ ಜೆಎಂಎಸ್ ಬಿಸಿನೆಸ್ ಸೆಂಟರ್ ಕಟ್ಟಡದ ಮೇಲ್ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಾಗ ಕಟ್ಟಡದೊಳಗೆ ಹಲವರು ಸಿಲುಕಿಕೊಂಡಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಏಣಿಗಳ ಸಹಾಯದಿಂದ ಕಟ್ಟಡದ ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದ ಐವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬೆಂಕಿಯ ಕಾರಣ ತಿಳಿಯಬೇಕಿದೆ
ಇನ್ನು ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಕಾರ್ಯಾಚರಣೆ ಮುಂದುವರೆದಿದೆ.





