Suspicious Death : ಹೋಂ ಸ್ಟೇ ಬಾತ್ ರೂಂನಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವತಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾಂದಿ ಗ್ರಾಮದಲ್ಲಿರುವ ಹೋಂ ಸ್ಟೇನಲ್ಲಿ ಯುವತಿ ಸ್ನಾನಗೃಹದಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ (ಅ. 25) ಬೆಳಗ್ಗೆ ನಡೆದಿದೆ.
ಮೃತಳ ಗುರುತು
ಮೃತಳನ್ನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದೇವಾಲಾಪುರ ಗ್ರಾಮದ ರಂಜಿತಾ (27) ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ಮೃತ ರಂಜಿತಾ ಅವರು ದಾವಣಗೆರೆ ಮೂಲದ ಗೆಳತಿ ರೇಖಾ ಅವರೊಂದಿಗೆ ಶುಕ್ರವಾರ ಸಂಜೆ ಹೋಂ ಸ್ಟೇನಲ್ಲಿ ತಂಗಿದ್ದರು. ಇವರು ಸ್ನೇಹಿತೆಯೊಬ್ಬಳ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಮೂಡಿಗೆರೆಗೆ ಬಂದಿದ್ದರು.
ಶನಿವಾರ ಬೆಳಗ್ಗೆ ರೇಖಾ ಸ್ನಾನ ಮಾಡಿ ಬಂದ ನಂತರ ರಂಜಿತಾ ಸ್ನಾನಕ್ಕೆ ತೆರಳಿದರು. ಆದರೆ ಬಹಳ ಹೊತ್ತಾದರೂ ಅವರು ಹೊರಬಾರದ ಹಿನ್ನೆಲೆಯಲ್ಲಿ, ರೇಖಾ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ದೊರಕಲಿಲ್ಲ. ನಂತರ ಕಿಟಕಿಯಿಂದ ನೋಡಿದಾಗ ರಂಜಿತಾ ಸ್ನಾನಗೃಹದಲ್ಲಿ ಬಿದ್ದಿರುವುದು ಕಂಡಿಬಂದಿದೆ.
ಇದನ್ನು ಓದಿ : ಹಿಂದಿ ನಟ ಸತೀಶ್ ಶಾ ನಿಧನ
ಹೋಂ ಸ್ಟೇ ಸಿಬ್ಬಂದಿಯ ಸಹಾಯದಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ರಂಜಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ತಕ್ಷಣ ಅವರನ್ನು ಮೂಡಿಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.

ಸಾವಿನ ಬಗ್ಗೆ ಶಂಕೆ
ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದ ಕಾರಣ, ಗ್ಯಾಸ್ ಸೋರಿಕೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಸ್ನಾನಗೃಹದಲ್ಲಿ ಸೂಕ್ತ ವೆಂಟಿಲೇಶನ್ ವ್ಯವಸ್ಥೆ ಇದ್ದು, ಗ್ಯಾಸ್ ಸೋರಿಕೆಯ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಹೃದಯಾಘಾತ ಶಂಕೆ
ಮೃತಳಿಗೆ ಹೃದಯಾಘಾತ ಅಥವಾ ಇತರ ಶಾರೀರಿಕ ಸಮಸ್ಯೆಯಿಂದ ಸಾವಾಗಿರಬಹುದೆಂಬ ಅಂಶಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಿಖರ ಕಾರಣ ಮರಣೋತ್ತರ ಪರೀಕ್ಷೆ (ಪೋಸ್ಟ್ಮಾರ್ಟಂ) ವರದಿ ಬಂದ ನಂತರ ಸ್ಪಷ್ಟವಾಗಲಿದೆ.
ಪೊಲೀಸ್ ತನಿಖೆ ಮುಂದುವರಿಕೆ
ಇನ್ನು ಈ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.

ಇದನ್ನು ನೋಡಿ : ಹೋಂ ಸ್ಟೇ ಬಾತ್ ರೂಮ್ನಲ್ಲಿ ಯುವತಿ ಅನುಮಾನಾಸ್ಪದ ಸಾವು




