Satish Shah : ಹಿಂದಿ ಧಾರಾವಾಹಿ ಖ್ಯಾತಿಯ ಹಿರಿಯ ನಟ ಸತೀಶ್ ಶಾ ಇಂದು ನಿಧನ ಹೊಂದಿದ್ದಾರೆ.

ಪ್ರಸಿದ್ಧ ಹಿಂದಿ ಧಾರಾವಾಹಿ ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಮೂಲಕ ಮನೆಮಾತಾದ ಹಿರಿಯ ನಟ ಸತೀಶ್ ಶಾ (74) ಇಂದು ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಅವರು ಮುಂಬೈಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಸಾಮಾಜಿಕ ಮಾಧ್ಯಮದ ಮೂಲಕ ಈ ದುಃಖದ ಸುದ್ದಿಯನ್ನು ತಿಳಿಸಿದ್ದು, “ನಮ್ಮ ಸ್ನೇಹಿತ ಹಾಗೂ ಅದ್ಭುತ ಕಲಾವಿದ ಸತೀಶ್ ಶಾ ಶನಿವಾರ ಮಧ್ಯಾಹ್ನ 2:30ಕ್ಕೆ ನಿಧನರಾದರು. ತೀವ್ರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.
1951ರಲ್ಲಿ ಮುಂಬೈಯಲ್ಲಿ ಗುಜರಾತಿ ಮೂಲದ ಕುಟುಂಬದಲ್ಲಿ ಜನಿಸಿದ ಸತೀಶ್ ಶಾ, 1970ರಲ್ಲಿ ‘ಭಗವಾನ್ ಪರಶುರಾಮ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ಜಾನೇ ಭಿ ದೊ ಯಾರೊ’(1983) ಚಿತ್ರದಲ್ಲಿನ ಡಿ’ಮೆಲ್ಲೊ ಪಾತ್ರದಿಂದ ಅವರಿಗೆ ದೊಡ್ಡ ಹೆಸರು ದೊರಕಿತು.
ಅವರು ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ‘ಹಮ್ ಸಾಥ್ ಸಾಥ್ ಹೈ’, ‘ಕಲ್ ಹೊ ನಾ ಹೊ’, ‘ಮುಜ್ಸೆ ಶಾದಿ ಕರೋಗಿ’, ‘ಓಂ ಶಾಂತಿ ಓಂ’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ : ಸುದೀಪ್ ಮುಂದೆಯೇ ಕಿತ್ತಾಡಿಕೊಂಡ ಜಾನ್ವಿ-ರಿಷಾ

ಕನ್ನಡ ಚಿತ್ರರಂಗಕ್ಕೂ ಸತೀಶ್ ಶಾ ಕಾಲಿಟ್ಟಿದ್ದು, 1998ರ ‘ಶಾಂತಿ ಶಾಂತಿ ಶಾಂತಿ’ಅವರ ಸ್ಯಾಂಡಲ್ವುಡ್ ಡೆಬ್ಯೂ ಆಗಿತ್ತು. ಅವರ ಕೊನೆಯ ಚಿತ್ರ 2014ರಲ್ಲಿ ಬಿಡುಗಡೆಯಾದ ‘ಹಮ್ಶಕಲ್ಸ್’ಆಗಿತ್ತು.
ಟೆಲಿವಿಷನ್ನಲ್ಲಿ ಅವರು ‘ಯೇ ಜೊ ಹೈ ಜಿಂದಗಿ’(1984–86) ಹಾಗೂ‘ಸಾರಾಭಾಯ್ ವರ್ಸಸ್ ಸಾರಾಭಾಯ್’ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ‘ಕಾಮಿಡಿ ಸರ್ಕಸ್’ ರಿಯಾಲಿಟಿ ಶೋಗೆ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.
ಇನ್ನು ಈ ಹಿರಿಯ ಕಲಾವಿದರ ನಿಧನದಿಂದ ಹಿರಿತೆರೆ ಹಾಗೂ ಕಿರುತೆರೆಗೆ ಅಪಾರ ನಷ್ಟ ಉಂಟಾಗಿದೆ ಎಂದು ಅನೇಕ ನಟರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನು ನೋಡಿ : ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಧಾರಾವಾಹಿ ಖ್ಯಾತಿಯ ನಟ ಸತೀಶ್ ಶಾ ನಿಧನ




