Siddaramaiah : ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಿನ್ನೆ ನಡೆದಿದ್ದ ‘ಅಶೋಕ ಜನಮನ-2025’ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಿನ್ನೆ (ಅ.20) ನಡೆದಿದ್ದ “ಅಶೋಕ ಜನಮನ – 2025” ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ 13 ಮಂದಿ ಅಸ್ವಸ್ಥರಾದ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದ ಸಂದರ್ಭದಲ್ಲಿ ಈ ಗದ್ದಲ ಉಂಟಾಯಿತು.
ಅಸ್ವಸ್ಥರಾದವರ ಸ್ಥಿತಿ – ಎಲ್ಲರೂ ಚೇತರಿಕೆ
ಇನ್ನು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರು ಮಾಹಿತಿ ನೀಡಿದ್ದು, ನೂಕುನುಗ್ಗಲಿನಿಂದಾಗಿ 13 ಮಂದಿ ಮಹಿಳೆಯರು ಅಸ್ವಸ್ಥರಾದರು. ಈ ಕಾರಣಕ್ಕೆ ಕೆಲವರಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಇತರರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಯಿತು. ಇದೀಗ ಎಲ್ಲರೂ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದಿದ್ದಾರೆ.
ಅಸ್ವಸ್ಥತೆಗೆ ಕಾರಣ
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕಾರ್ಯಕ್ರಮದಲ್ಲಿ ಆಹಾರ ಮತ್ತು ಉಡುಗೊರೆ ವಿತರಣೆ ವಿಳಂಬವಾದ ಕಾರಣ ಹೈಪೊಗ್ಲೈಸಿಮಿಯಾ ಅಥವಾ ನಿರ್ಜಲೀಕರಣದಿಂದ ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಮಳೆಯ ಕಾರಣದಿಂದ ಮೈದಾನ ಕೆಸರುಮಯವಾಗಿದ್ದ ಹಿನ್ನೆಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರಬಹುದು ಎಂಬ ಚಿಂತನೆಗಳೂ ವ್ಯಕ್ತವಾಗಿದೆ.
ಇದನ್ನು ನೋಡಿ : ಇದು ಪ್ರಜಾಶಕ್ತಿ ಟಿವಿಯ BIG IMPACT ಸರ್ವೀಸ್ ರಸ್ತೆಯಲ್ಲಿದ್ದ ಲಾರಿಗಳ ತೆರವು

ಪೊಲೀಸ್ ಇಲಾಖೆ ನೇರ ಎಚ್ಚರಿಕೆ
ಇನ್ನು ಈಗಾಗಲೇ ಮಳೆಯಿಂದ ಮೈದಾನ ಕೆಸರಿನಿಂದ ತುಂಬಿದ್ದು, ಪೂರ್ಣ ಸಿದ್ಧತೆ ಇಲ್ಲದಿದ್ದ ಕಾರಣ ಪೊಲೀಸರು ಆಯೋಜಕರಿಗೆ ಪತ್ರ ಬರೆದು ಹೆಚ್ಚಿನ ಆಸನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದರು. ಪ್ರಾರಂಭದಲ್ಲಿ ಕಡಿಮೆ ಕುರ್ಚಿಗಳಿದ್ದರೂ, ನಂತರ ಆಯೋಜಕರು ಹೆಚ್ಚಿನ ಆಸನ ವ್ಯವಸ್ಥೆ ಮಾಡಿದ್ದರು.
ದೀಪಾವಳಿ ಹಿನ್ನಲೆ – ಉಡುಗೊರೆ ವಿತರಣಾ ಕಾರ್ಯಕ್ರಮ
ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ‘ಅಶೋಕ ಜನಮನ-2025’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೀಪಾವಳಿ ಹಬ್ಬದ ಅಂಗವಾಗಿ ಅವರು ಮಾಲೀಕರಾಗಿರುವ ಟ್ರಸ್ಟ್ನಿಂದ ತಟ್ಟೆ ಮತ್ತು ವಸ್ತ್ರ ವಿತರಣೆ ನಡೆಯಿತು. ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
ಇದನ್ನು ಓದಿ : ಭಾರೀ ಮಳೆ ಮುನ್ಸೂಚನೆ – ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ
ಇನ್ನು ಪ್ರಮುಖ ರಾಜಕೀಯ ಮತ್ತು ಜನಸಾಮಾನ್ಯರ ಸಮಾಗಮದ ಕಾರ್ಯಕ್ರಮದಲ್ಲಿ ಅಗತ್ಯ ಮೀರಿ ಜನರು ಆಗಮಿಸಿದ ಕಾರಣ, ನಿರ್ವಹಣಾ ಕೊರತೆಯಿಂದಾಗಿ ಅಸ್ವಸ್ಥತೆ, ನೂಕುನುಗ್ಗಲು ಕಂಡುಬಂದಿದೆ.





