
ACTOR VISHNU VARDHAN BIRTHDAY : ಇಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರು ನಟನೆ ಯಿಂದ ಮಾತ್ರವಲ್ಲದೇ ಸಮಾಜ ಸೇವೆಯಿಂದಲೂ ಅಪಾರ ಹೆಸರು ಗಳಿಸಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿ ರುವ ಅವರು ಇಂದು ಬದುಕಿದ್ದರೆ ತಮ್ಮ 75ನೇ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆಗೆ ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಅವರು ನಮ್ಮೊಂದಿಗಿಲ್ಲವಾದರೂ ಅವರು ನಟಿಸಿದ್ದ ಸಿನಿಮಾ ಮೂಲಕ ಇಂದಿಗೂ ಜೀವಂತವಾಗಿದ್ದಾರೆ.
ಮೈಸೂರಿನಲ್ಲಿ 1950ರ ಸೆಪ್ಟೆಂಬರ್ 18ರಂದು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪ ತಿಯ ಮಗನಾಗಿ ಜನಿಸಿದ್ದ ವಿಷ್ಣುವರ್ಧನ್ ಅವರ ಮೂಲ ಹೆಸರು ಸಂಪತ್ ಕುಮಾರ್. ಮೈಸೂರಿನಲ್ಲಿ ತಮ್ಮ ಶಿಕ್ಷಣ ಆರಂಭಿಸಿ, ಬೆಂಗಳೂರಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದು, ಬಾಲ್ಯದಿಂದಲೇ ನಟನೆಯಲ್ಲಿ ಬಹಳ ಆಸಕ್ತಿಯಿದ್ದ ಇವರು, 1955ರಲ್ಲಿ ಶಿವಶರಣ ನಂಬೆಯಕ್ಕ ಸಿನಿಮಾದಲ್ಲಿ ಬಾಲನಟನಾಗಿ ತಮ್ಮ ಅಭಿನಯವನ್ನು ಆರಂಭಿಸಿದರು. ಈ ಸಿನಿಮಾ ಮೂಲಕ ಅವರ ಹೆಸರು ಸಂಪತ್ ಕುಮಾರ್ ನಿಂದ ಬದಲಾಗಿ ವಿಷ್ಣು ಎಂದು ಬದಲಾಯಿತು.
1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನಿಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಬಳಿಕ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ ಇದರಲ್ಲಿ ಸಣ್ಣ ಪಾತ್ರವನ್ನು ಕೂಡ ವಿಷ್ಣುವರ್ಧನ್ ಅವರು ಅಭಿನಯಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾದಲ್ಲಿ 1972ರಲ್ಲಿ ನಟಿಸುವ ಮೂಲಕ ನಾಯಕನಾಗಿ ನಟಿಸಿ ತೆರೆ ಮೇಲೆ ಮಿಂಚಿದರು. ಸಂಪತ್ ಕುಮಾರ (ವಿಷ್ಣು) ಎಂದು ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಹೆಸರಾಂತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಎನ್ನಬಹುದು. ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು..
ನಾಗರಹಾವು ಸಿನಿಮಾ ನಂತರ ಅವರು ಅಭಿನಯಿಸಿದ ಚಿತ್ರಗಳ ಪಟ್ಟಿಯು ಅಲುಗಾಡದ ಪ್ರತಿಭೆಯ ಸಾಕ್ಷ್ಯವಾಗಿ ಉಳಿದಿದೆ. ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ, ಗಂಧದ ಗುಡಿ, ಬೂತಯ್ಯನ ಮಗ ಅಯ್ಯು, ದೇವರ ಗುಡಿ, ಸಾಹಸ ಸಿಂಹ, ಮುತ್ತಿನ ಹಾರ, ಮತ್ತೆ ಹಾಡಿತು ಕೋಗಿಲೆ, ಸಂಘರ್ಷ, ಆಪ್ತಮಿತ್ರ, ಆಪ್ತ ರಕ್ಷಕ, ಯಜಮಾನ ಸಿನಿಮಾಗಳು ಇತ್ಯಾದಿ ಸುಪರ್ಹಿಟ್ ಆದವು.
ವಿಷ್ಣುವರ್ಧನ್ ಅವರು ಕೇವಲ ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಬಹುಭಾಷಾ ಕಲಾವಿದರಾಗಿ ಗುರುತಿಸಿಕೊಂಡರು. ಹಿಂದಿ ಸಿನಿಮಾಗಳಾದ ಖಾಕಿ ವರ್ಧಿ, ಜಾಲೀಮ್, ತಮಿಳಿನ ವಿಡುದಲೈ, ಈಟಿ, ತೆಲುಗಿನಲ್ಲಿ ಲಕ್ಷ್ಮಿ ನಿರ್ದೋಶಿ ಮತ್ತು ಮಲಯಾಳಂ ಭಾಷೆಯ ಕೆಲವು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.





