Chikkamagaluru : ಕಾಫಿನಾಡು ಚಿಕ್ಕಮಗಳೂರಿನ ಶಕ್ತಿ ದೇವತೆ ದೇವೀರಮ್ಮನ ಜಾತ್ರೆಯ ಸಲುವಾಗಿ ಸಾವಿರಾರು ಭಕ್ತರು ಬೆಟ್ಟ ಹತ್ತಲು ಕಾತುರರಾಗಿದ್ದಾರೆ.

ಕಾಫಿನಾಡಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಆದರೆ ಸಮುದ್ರ ಮಟ್ಟದಿಂದ 6 ಸಾವಿರ ಅಡಿ ಎತ್ತರದಲ್ಲಿ ಸ್ಥಿತಿಯಾಗಿರುವ ದೇವಿರಮ್ಮ ಬೆಟ್ಟದ ತಾಯಿಯ ದರ್ಶನ ಪಡೆಯಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.
ಎರಡು ದಿನಗಳ ಕಾಲ ದರ್ಶನಕ್ಕೆ ಅವಕಾಶ
ವರ್ಷಕ್ಕೊಮ್ಮೆ ಮಾತ್ರ ದರ್ಶನಕ್ಕೆ ಅವಕಾಶ ಸಿಗುವ ಈ ದೇವಸ್ಥಾನಕ್ಕೆ ಈ ವರ್ಷ ಅಕ್ಟೋಬರ್ 19 (ಶನಿವಾರ) ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಹಾಗೂ ಅಕ್ಟೋಬರ್ 20 (ಭಾನುವಾರ) ಬೆಳಿಗ್ಗೆ 6 ರಿಂದ ಸಂಜೆ 3 ಗಂಟೆವರೆಗೆ ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಗಿದೆ. ಈ ಬಾರಿ ದೇವರಮ್ಮನ ‘ಅಪ್ಪಣೆ’ ಪಡೆದು ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನ ಸಮಿತಿಯು ಎರಡು ದಿನದ ದರ್ಶನಕ್ಕೆ ಅವಕಾಶ ವಲ ಎರಡು ದಿನದ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ರಾತ್ರಿ ವೇಳೆ ಬೆಟ್ಟ ಏರಿಕೆಗೆ ಜಿಲ್ಲಾಡಳಿತ ನಿರ್ಬಂಧ
ಇನ್ನು ರಾತ್ರಿ ವೇಳೆ ಬೆಟ್ಟ ಏರಿಕೆಗೆ ಜಿಲ್ಲಾಡಳಿತ ನಿರ್ಬಂಧ ಹಾಕಿದ್ದು, ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಇರುವ ದೇವಿರಮ್ಮ ಬೆಟ್ಟದ ಜೊತೆಗೆ, ಮಲ್ಲೇನಹಳ್ಳಿಯ ಬೆಂಡಿಗ ಬೆಟ್ಟಗಳ ಸಾಲುಗಳಲ್ಲಿಯೂ ಮಳೆ ತೀವ್ರತೆಯಿಂದಾಗಿ ಭೂಭಾಗಗಳ ಅಪಾಯವಿದೆ. ಇದರಿಂದಾಗಿ ರಾತ್ರಿ ವೇಳೆ ಭಕ್ತರಿಗೆ ಬೆಟ್ಟ ಏರುವುದು ಅಪಾಯಕಾರಿ ಎನ್ನಲಾಗಿದೆ.

ಜಿಲ್ಲಾಡಳಿತ ಮತ್ತು ದೇವಸ್ಥಾನ ಸಮಿತಿಯ ಸೂಚನೆಯಂತೆ ಭಕ್ತರು ಸರಿಯಾದ ಸಮಯದಲ್ಲಿ ಸುರಕ್ಷಿತವಾಗಿ ದರ್ಶನ ಪಡೆಯಬೇಕು. ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಲೆಕ್ಕ ಹಾಕಿ ಸ್ಥಳೀಯ ಪರಿಸ್ಥಿತಿಯ ಅಧೀನವಾಗಿ ಈ ಬಾರಿ ಕೇವಲ ಎರಡು ದಿನದ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಭಕ್ತರಿಗೆ ಸಲಹೆ
ಹವಾಮಾನಕ್ಕೆ ತಕ್ಕ ರೀತಿ ತಯಾರಿ ಮಾಡಿಕೊಂಡು, ಮಳೆಗೆ ರಕ್ಷಣೆ, ಸರಿಯಾದ ಪಾದರಕ್ಷೆ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ಬೆಟ್ಟ ಏರಲು ಜಿಲ್ಲಾಡಳಿತದಿಂದ ಮನವಿ ಮಾಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಳೆಯ ಸವಾಲಿನ ನಡುವೆಯೂ ಭಕ್ತರು ದೇವೀರಮ್ಮನ ದರ್ಶನಕ್ಕೆ ಉತ್ಸುಕರಾಗಿದ್ದಾರೆ. ಮಳೆ ಹೀಗೆ ಮುಂದುವರೆದರೆ ಸೋಮವಾರ ಬೆಟ್ಟ ಹತ್ತುವ ಭಕ್ತರಿಗೆ ಜಿಲ್ಲಾಡಳಿತ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ.





