Accident : ಸಾರಿಗೆ ಸಂಸ್ಥೆಯ ಬಸ್ವೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು 49 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಡ್ಡಿ ಘಾಟ್ನ ಅಪಾಯಕಾರಿ ತಿರುವಿನಲ್ಲಿ ನೆನ್ನೆ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಸಾರಿಗೆ ಸಂಸ್ಥೆಯ ಬಸ್ವೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, ಚಾಲಕ ಹಾಗೂ ನಿರ್ವಾಹಕ ಸೇರಿದಂತೆ 49 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ವಿವರ
ಕೂಡಲ ಸಂಚಾರಿ ನಿರ್ಬಂಧದ ಹಿನ್ನೆಲೆಯಲ್ಲಿ ಶಿರಸಿಗೆ ಹೋಗುವ ಮಾರ್ಗವನ್ನು ವಡ್ಡಿ ಘಾಟ್ ಮೂಲಕ ವಾಲಿಸಲಾಗಿತ್ತು. ಈ ಮಾರ್ಗದ ಘಟ್ಟ ಪ್ರದೇಶದಲ್ಲಿ ತೀವ್ರ ತಿರುವುಗಳು ಇರುವುದರಿಂದ ಅಪಾಯವೇ ಹೆಚ್ಚು. ಈ ವೇಳೆ ಬಳ್ಳಾರಿಯಿಂದ ಕುಮಟಾಗೆ ಬರುತ್ತಿದ್ದ ಬಸ್ ಚಾಲಕ ನಿಯಂತ್ರಣ ತಪ್ಪಿ ವಾಹನವು ಮೂರು ಬಾರಿ ಪಲ್ಟಿಯಾಗಿ ಕಂದಕಕ್ಕೆ ಉರುಳಿದೆ.
ಇನ್ನು ಈ ಅಪಘಾತದ ವೇಳೆ ಬಸ್ಸಿನಲ್ಲಿ 49 ಪ್ರಯಾಣಿಕರಿದ್ದು, ಬಹುತೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಮೇಲೆತ್ತಿ, ಖಾಸಗಿ ವಾಹನಗಳ ಮೂಲಕ ಅಂಕೋಲಾ ಹಾಗೂ ಕುಮಟಾ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಇದನ್ನು ಓದಿ : ಪಟಾಕಿ ಸಿಡಿಸಲು ಸರ್ಕಾರದಿಂದ ಮಾರ್ಗಸೂಚಿ

ಇನ್ನು ಘಟನೆಯ ಮಾಹಿತಿ ತಿಳಿದ ಕೂಡಲೇ ಅಂಕೋಲಾ ಠಾಣೆಯ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರ ಆಕ್ರೋಶ:
ವಡ್ಡಿ ಘಾಟ್ ರಸ್ತೆಯ ತಿರುವುಗಳು ಅತ್ಯಂತ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ, ದುರಸ್ತಿ ಹಾಗೂ ಸೂಕ್ತ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಎಂ. ಶೆಟ್ಟಿ ಅವರು ಒತ್ತಾಯಿಸಿದ್ದಾರೆ. ಇನ್ನು ಈ ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ಕಂದಕಕ್ಕೆ ಉರುಳಿದ ಬಸ್; ಚಾಲಕ, ನಿರ್ವಾಹಕ ಸೇರಿ 49 ಪ್ರಯಾಣಿಕರಿಗೆ ಗಾಯ




