ಉತ್ತರ ಕನ್ನಡ ಜಿಲ್ಲೆಯ Sirsi ಯಲ್ಲಿ ಕೊಟ್ಟ ಹಣ ವಾಪಸ್ ಕೇಳಿದ ಮಹಿಳೆಯರ ಮೇಲೆ ಗ್ಯಾಂಗ್ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ…

ಉತ್ತರ ಕನ್ನಡ ಜಿಲ್ಲೆಯ Sirsi ಯಲ್ಲಿ ಮಹಿಳೆಯರ ಮೇಲೆ ಗ್ಯಾಂಗ್ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಕೊಟ್ಟ ಹಣ ಮರುಪಾವತಿಸುವಂತೆ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗ ಥಳಿಸಲಾಗಿದೆ ಎಂದು ದೂರಲಾಗಿದೆ. ಈ ಘಟನೆ ಶಿರಸಿಯ ನೆಹರು ನಗರ ಪ್ರದೇಶದಲ್ಲಿ ನಡೆದಿದೆ.
ಯಲ್ಲಾಪುರದ ಮಹಿಳೆಯರಾದ ಆಯಿಷಾ ಮತ್ತು ಗೀತಾ ಎಂಬವರ ಮೇಲೆ ಮೊಹಮ್ಮದ್ ಸಲ್ಮಾನ್ ಮತ್ತು ಅವನ ತಂಡ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಮಹಿಳೆಯರು ಕೊಟ್ಟ ಹಣವನ್ನು ಹಿಂದಿರುಗಿಸುವಂತೆ ಕೇಳಿದ ಸಂದರ್ಭದಲ್ಲಿ ಮಾತುಕತೆ ತೀವ್ರವಾಗಿ ವಾಗ್ವಾದಕ್ಕೆ ತಿರುಗಿ, ಬಳಿಕ ಹಿಂಸಾತ್ಮಕ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಅಂಗಡಿ ಆರಂಭಿಸಲು ಲಕ್ಷಾಂತರ ರೂಪಾಯಿ ಹಣ ನೀಡಿದ್ದ ಮಹಿಳೆ
ಹಲ್ಲೆಗೊಳಗಾದ ಮಹಿಳೆಯರಲ್ಲಿ ಒಬ್ಬರಾದ ಆಯಿಷಾ ಅವರು ಆರೋಪಿಗೆ ಅಂಗಡಿ ಆರಂಭಿಸಲು 3 ಲಕ್ಷ 80 ಸಾವಿರ ರೂಪಾಯಿ ಹಣ ನೀಡಿದ್ದರು ಎಂದು ತಿಳಿದುಬಂದಿದೆ.
ಆದರೆ, ಪತಿ ಮೃತಪಟ್ಟ ಕಾರಣದಿಂದ ಅವರು ಕೆಲವು ದಿನಗಳ ಕಾಲ ಹುಬ್ಬಳ್ಳಿಗೆ ತೆರಳಿ ಅಲ್ಲಿ ನೆಲೆಸಿದ್ದರು. ಎರಡು ತಿಂಗಳ ಬಳಿಕ ಮರಳಿ ಬಂದಾಗ ಆರೋಪಿ ಊರಲ್ಲಿ ಇರಲಿಲ್ಲ. ಬಳಿಕ ಆತ ಶಿರಸಿಗೆ ಬಂದು ವ್ಯಾಪಾರ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಂತ್ರಸ್ತೆಗೆ ದೊರಕಿದೆ.
ಹಣ ಕೇಳಿದಾಗ ಏಕಾಏಕಿ ದಾಳಿ ನಡೆಸಿದ ತಂಡ
ಈ ಹಿನ್ನೆಲೆ ಮಹಿಳೆ ನೇರವಾಗಿ ಶಿರಸಿಗೆ ತೆರಳಿ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಇದೇ ವೇಳೆ ನಾಲ್ಕೈದು ಜನರ ತಂಡ ಏಕಾಏಕಿ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆಯ ಹೇಳಿಕೆಯಂತೆ, ಆರೋಪಿಗಳು ಅವರ ಖಾಸಗಿ ಭಾಗಗಳ ಮೇಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಹಿಂದೆಯೂ ಸಾಲ ಮಾಡಿ ಹಣ ನೀಡದೇ ತಲೆಮರೆಸಿಕೊಂಡಿದ್ದ ಆರೋಪಿಗಳು
ಸಂತ್ರಸ್ತೆಯ ಮಾಹಿತಿಯಂತೆ, ಸುಮಾರು 18 ರಿಂದ 20 ವರ್ಷಗಳಿಂದ ಯಲ್ಲಾಪುರದಲ್ಲಿ ನೆಲೆಸಿದ್ದ ಕೆಲವು ಯುವಕರು ಸಲೂನ್ ಉದ್ಯಮದಲ್ಲಿ ಪಾಲುದಾರರಾಗುವಂತೆ ಕೇಳಿದ್ದರು.
ಅವರ ಮಾತನ್ನು ನಂಬಿ ಹಣ ನೀಡಿದ ನಂತರ ಅಂಗಡಿ ಆರಂಭಿಸಿದ್ದರೂ, ಕೆಲವೇ ದಿನಗಳಲ್ಲಿ ಅಂಗಡಿ ಮುಚ್ಚಿ ಹಲವೆಡೆ ಸಾಲ ಮಾಡಿಕೊಂಡಿರುವುದು ಗೊತ್ತಾಗಿದೆ.
ಈ ಬಗ್ಗೆ ಮೊದಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಹಣ ನೀಡುವುದಾಗಿ ಒಪ್ಪಿಕೊಂಡಿದ್ದ ಆರೋಪಿಗಳು ಬಳಿಕ ಹಣ ನೀಡದೆ ತಲೆಮರೆಸಿಕೊಂಡಿದ್ದರು.




