Deepavali : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ನವೀನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ನವೀನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳ ಪ್ರಕಾರ, ಈ ಬಾರಿಯ ದೀಪಾವಳಿ ಪಟಾಕಿ ರಹಿತವಾಗಿರಬೇಕೆಂಬ ಮಹತ್ವದ ಮನವಿಯೊಂದಿಗೆ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುವಂತೆ ಸರ್ಕಾರ ಕೇಳಿಕೊಂಡಿದೆ.
ಹಸಿರು ಪಟಾಕಿ ಮಾತ್ರ ಅನುಮತಿ
ಪಟಾಕಿಗಳ ಶಬ್ದ ಮತ್ತು ವಾಯು ಮಾಲಿನ್ಯದಿಂದ ಪರಿಸರ ಹಾಗೂ ಮಾನವ ಆರೋಗ್ಯ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸಿಎಸ್ಐಆರ್ (CSIR) ಮತ್ತು ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (NEERI) ಮಾನ್ಯತೆ ಪಡೆದ ಹಸಿರು ಪಟಾಕಿ ಗಳನ್ನು ಮಾತ್ರ ಬಳಸದಂತೆ ಸೂಚಿಸಲಾಗಿದೆ. ಪಟಾಕಿಗಳ ಬಾಕ್ಸ್ಗಳ ಮೇಲೆ ಈ ಸಂಸ್ಥೆಗಳ ಲೋಗೋ ಮತ್ತು ನೊಂದಾಯಿತ ಸಂಖ್ಯೆ ಇದ್ದೇ ಇರಬೇಕು.
ಪಟಾಕಿ ಮಾರಾಟಕ್ಕೆ ನಿಯಮಗಳು ಕಡ್ಡಾಯ
ಪರವಾನಗಿ ಪಡೆದ ಮಾರಾಟಗಾರರು ಮಾತ್ರ ನಿಗದಿತ ದಿನಾಂಕ ಮತ್ತು ಸ್ಥಳದಲ್ಲಿ ತಾತ್ಕಾಲಿಕ ಅಂಗಡಿಗಳನ್ನು ಸ್ಥಾಪಿಸಬಹುದಾಗಿದೆ. ನಿಷೇಧಿತ ಪಟಾಕಿಗಳ ಮಾರಾಟ ಕಂಡುಬಂದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನು ಓದಿ : ರಾಜ್ಯದಲ್ಲಿ ಹಿಂಗಾರು ಮಳೆ ಅಬ್ಬರ ಮುಂದಿನ 4 ದಿನ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಪಟಾಕಿ ಸಿಡಿಸುವ ವೇಳೆ ಎಚ್ಚರಿಕೆ ಅಗತ್ಯ
- ಅಪಾರ್ಟ್ಮೆಂಟ್, ವಠಾರ, ನೆರೆಹೊರೆಯ ಮನೆಯವರು ಒಂದೆಡೆ ಕಲೆತು ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿ. ಹಬ್ಬದ ಆಚರಣೆಯಲ್ಲಿ ಬೆಳಕೇ ಪ್ರಧಾನವಾಗಿರಲಿ.
- ಗಿಡ, ಮರ, ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ.
- ಶಾಶ್ವತವಾಗಿ ಕಣ್ಣು, ಕಿವಿಗೆ ಹಾನಿಯಾಗಬಾರದು ಎಂಬ ದೃಷ್ಟಿಯಿಂದ 125 ಡೆಸಿಬಲ್ ಶಬ್ದ ಮಿತಿಗೆ ಮೀರಿದ ಪಟಾಕಿಗಳನ್ನು ನಿಷೇಧಿಸಲಾಗಿದೆ.
- ಶಾಲೆಗಳು, ಆಸ್ಪತ್ರೆಗಳು ಮತ್ತು ವೃದ್ಧಾಶ್ರಮಗಳ ಹತ್ತಿರ ಪಟಾಕಿ ಸಿಡಿಸುವುದು ನಿಷಿದ್ಧ.
ಪಟಾಕಿ ತ್ಯಾಜ್ಯ ವಿಲೇವಾರಿ ಸೂಕ್ತವಾಗಿ
ಪಟಾಕಿಗಳ ನಂತರ ಉಂಟಾಗುವ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಸ್ಥಳೀಯ ಸಂಸ್ಥೆಗಳ ಕಸ ಸಂಗ್ರಹ ವಾಹನಗಳಿಗೆ ಒಪ್ಪಿಸುವುದು ಕಡ್ಡಾಯ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಮಯ ನಿಗದಿ
ಹಬ್ಬದ ದಿನಗಳಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದು ಕಾನೂನುಬಾಹಿರ.

ಇದನ್ನು ನೋಡಿ : ಪಟಾಕಿ ಸಿಡಿಸೋ ಮುನ್ನ ಈ ರೂಲ್ಸ್ ಗೊತ್ತಿರಲಿ… ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ




