Rishab Shetty : ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಹೊಸ ಚಿತ್ರ ‘ಕಾಂತಾರ: ಚಾಪ್ಟರ್ 1’ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿದ್ದಾರೆ.

ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಹೊಸ ಚಿತ್ರ ‘ಕಾಂತಾರ: ಚಾಪ್ಟರ್ 1’ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿದ್ದಾರೆ. 2022ರಲ್ಲಿ ತೆರೆ ಕಂಡ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ₹700 ಕೋಟಿ ಗಳಿಸಿ ದಾಖಲೆ ಸೃಷ್ಟಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಅಕ್ಟೋಬರ್ 2 ರಂದು ಬಹುಭಾಷೆಯಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು 4ನೇ ಶತಮಾನಕ್ಕೆ ಕರೆದೊಯ್ದಿದೆ.
ದೇವೇಗೌಡ ಅವರ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ
ಚಿತ್ರದಲ್ಲಿ ನಾಯಕನಾಗಿ ಮತ್ತು ನಿರ್ದೇಶಕರಾಗಿ ಮಿಂಚಿರುವ ರಿಷಬ್ ಶೆಟ್ಟಿ, ಈ ಸಾಧನೆಯ ಹಿನ್ನೆಲೆಯಲ್ಲಿ ಭಾರತದ ಮಾಜಿ ಪ್ರಧಾನಿಯವರಾದ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ. ಈ ವಿಶೇಷ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ದೇವೇಗೌಡರ ಅನುಭವ ಮತ್ತು ಆಶೀರ್ವಾದದಿಂದ ತಮಗೆ ಇನ್ನಷ್ಟು ಶಕ್ತಿ ದೊರೆತಿದೆ ಎಂದು ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರ ಎಕ್ಸ್ ಪೋಸ್ಟ್ನಲ್ಲಿ ಏನಿದೆ
ದೇವೇಗೌಡ ಅವರೊಂದಿಗಿನ ಫೋಟೊವನ್ನು ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼʼಇದು ಬರೀ ಭೇಟಿಯಲ್ಲ, ನಮ್ಮ ನಾಡಿನ ಹಿರಿಯ ಚೇತನದೊಂದಿಗಿನ ಒಂದು ಸುಂದರ ಸಂವಾದ. ನಾಡಿನ ಅತ್ಯುನ್ನತ ಸ್ಥಾನಕ್ಕೆ ಏರಿ, ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ ಪಡೆದ ಕ್ಷಣಗಳು. ಅವರ ಅನುಭವದ ಮಾತುಗಳು ಮತ್ತು ಪ್ರೀತಿಯ ತಲೆದಡವು, ನನಗೆ ಮತ್ತಷ್ಟು ಶಕ್ತಿ ತುಂಬಿದೆ. ಈ ಪ್ರೀತಿ, ಆಶೀರ್ವಾದ ಸದಾ ಇರಲಿʼʼ ಎಂದು ಅವರು ಬರೆದುಕೊಂಡಿದ್ದಾರೆ.
ದೇವೇ ಗೌಡರ ಆರೋಗ್ಯ ವಿಚಾರಿಸಿದ ರಿಷಬ್ ಶೆಟ್ಟಿ
ಕೆಲವು ದಿನಗಳ ಹಿಂದೆ ಎಚ್.ಡಿ. ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚೇತರಿಸಿಕೊಂಡು ತಮ್ಮ ನಿವಾಸಕ್ಕೆ ಮರಳಿದ್ದಾರೆ. ಹೀಗಾಗ ಅವರ ಆರೋಗ್ಯವನ್ನೂ ರಿಷಬ್ ಶೆಟ್ಟಿ ವಿಚಾರಿಸಿದರು. ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪತ್ನಿ ಜತೆ ʼಕಾಂತಾರ: ಚಾಪ್ಟರ್ 1′ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನು ಓದಿ : ಒಂದೇ ದಿನ ಒಟಿಟಿಗೆ ಕಾಲಿಟ್ಟ ಎರಡು ಹಿಟ್ ಚಿತ್ರಗಳು





