Drowned : ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ಒಂದು ಭೀಕರ ದುರಂತ ಸಂಭವಿಸಿದೆ. ಕಡಲ ತೀರದಲ್ಲಿ ಆಟವಾಡಲು ಹೋದ ನಾಲ್ವರು ಬಾಲಕರಲ್ಲಿ ಮೂವರು ಕಡಲ ಅಲೆಗಳಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ನೆನ್ನೆ ಸಂಜೆ ಸಂಭವಿಸಿದೆ.
ಮೃತ ವಿದ್ಯಾರ್ಥಿಗಳು:
ನೀರುಪಾಲಾದ ಮೂವರು ಬಾಲಕರು
- ಆಶಿಶ್ ದೇವಾಡಿಗ (15) – 9ನೇ ತರಗತಿ ವಿದ್ಯಾರ್ಥಿ, ಕಿರಿಮಂಜೇಶ್ವರ ಶಾಲೆ
- ಸೂರಜ್ ಪೂಜಾರಿ (16) – 10ನೇ ತರಗತಿ ವಿದ್ಯಾರ್ಥಿ, ಕಿರಿ ಮಂಜೇಶ್ವರ ಹೈಸ್ಕೂಲ್
- ಸಂಕೇತ ದೇವಾಡಿಗ (18) – ದ್ವಿತೀಯ ಪಿಯುಸಿ ವಿದ್ಯಾರ್ಥಿ, ಬೈಂದೂರು ಪಿಯು ಕಾಲೇಜು
ಅಲೆಗಳ ಅಂದಾಜಿಲ್ಲದೆ ದುರ್ಘಟನೆ
ನಾಲ್ಕು ಮಂದಿ ಮಕ್ಕಳು ಸಂಜೆ ವಾಲಿಬಾಲ್ ಆಟವಾಡಿ, ನಂತರ ಗಾಳ ಹಾಕಲೆಂದು ಕಡಲ ತೀರಕ್ಕೆ ಹೋಗಿದ್ದರು. ನೀರಿನ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ, ಮುಳುಗಡೆಯಾಗಿದ್ದಾರೆ. ಈ ಪೈಕಿ ಈಜಿಕೊಂಡು ಬಚಾವಾಗಿ ಬಂದ ಬಾಲಕ ಸ್ಥಳದಲ್ಲಿ ಇದ್ದ ಮೀನುಗಾರರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಕಡಲಿಗೆ ಹಾರಿ ಮೂವರು ಮಕ್ಕಳನ್ನು ಬಚಾವ್ ಮಾಡಲು ಮೀನುಗಾರರು ಪ್ರಯತ್ನಿಸಿದ್ದಾರೆ. ಕಡಲ ಮಕ್ಕಳ ಈ ಸಾಹಸ ಫಲ ನೀಡಲಿಲ್ಲ. ಅಷ್ಟರಲ್ಲಿಯೇ ಕಡಲ ಅಲೆಗಳಲ್ಲಿ ಮೂವರು ಮಕ್ಕಳು ಉಸಿರು ಚೆಲ್ಲಿದ್ದಾರೆ. ತಕ್ಷಣವೇ ಶವಗಳನ್ನು ಮೇಲಕ್ಕೆತ್ತಲಾಗಿದೆ.
ಇದನ್ನು ಓದಿ : ಇಂದಿನಿಂದ ರಣಜಿ ಟ್ರೋಫಿ ಆರಂಭ

ಗ್ರಾಮಸ್ಥರಲ್ಲಿ ಆಘಾತ
ಕೂಲಿ ಕೆಲಸ ಮಾಡುವ ಕುಟುಂಬಗಳ ಮಕ್ಕಳು ಜೀವನದ ಮುಂದಿನ ಹಂತದ ಕನಸುಗಳನ್ನು ಬೆಸೆದುಕೊಂಡಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ದುರಂತದಿಂದ ಗ್ರಾಮಸ್ಥರು ಶೋಕದಲ್ಲಿ ಮುಳುಗಿದ್ದಾರೆ. ಕೊಡೇರಿಯ ಹೊಸಹಿತ್ಲು ಕಡಲ ತೀರದಲ್ಲಿ ನಡೆದಿರುವ ಈ ದುರಂತ, ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ.
ಶಾಸಕರ ಭೇಟಿಯು, ಎಚ್ಚರಿಕೆಯ ಕರೆ
ಘಟನೆಯ ಮಾಹಿತಿ ತಿಳಿದ ಬಳಿಕ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೃತ ಮಕ್ಕಳ ಪಾರ್ಥಿವ ಶರೀರಗಳಿಗೆ ಗೌರವ ಸಲ್ಲಿಸಿದರು ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕಡಲ ತೀರಗಳಿಗೆ ಹೋಗುವ ಪ್ರವಾಸಿಗರು ಹಾಗೂ ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಸಮುದ್ರದ ಅಲೆಗಳ ಪ್ರಕ್ಷುಬ್ಧತೆಯ ಅಂದಾಜು ಸಿಗುವುದಿಲ್ಲ. ಹಲವು ಸಲ ಸ್ಥಳೀಯರೇ ಇಲ್ಲಿ ದುರಂತದಲ್ಲಿ ಮೃತಪಟ್ಟಿರುವುದರಿಂದ ಬೇರೆ ಊರುಗಳಿಂದ ಬಂದವರು ಕಡಲಿಗಿಳಿಯುವಾಗ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.





