FIRE ACCIDENT IN HARDWARE SHOP : ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಾಲಾಜಿ ಹಾರ್ಡ್ ವೇರ್ ಅಂಗಡಿಯಲ್ಲಿ (Balaji Hardware Shop) ನೆನ್ನೆ ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ರಂಗಸ್ವಾಮಿ ಅವರಿಗೆ ಸೇರಿದ ಈ ಅಂಗಡಿಯಲ್ಲಿ ವಿದ್ಯುತ್ ಉಪಕರಣಗಳು, ಹಾರ್ಡ್ ವೇರ್ ಹಾಗೂ ಕೃಷಿ ಪರಿಕರಗಳ ಸಂಗ್ರಹವಿದ್ದು, ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಅವರು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ರಾತ್ರಿ 8:30ರ ಸುಮಾರಿಗೆ ಅಂಗಡಿಯ ಒಳಗಿನಿಂದ ದಟ್ಟ ಹೊಗೆ ಕಾಣಿಸಿಕೊಂಡು, ಹತ್ತಿರದ ಅಂಗಡಿಯವರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಗಿಲು ಒಡೆದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಕಾಲದಲ್ಲಿ ಬೆಂಕಿ ನಂದಿಸಲ್ಪಟ್ಟಿದ್ದರಿಂದ ಅಕ್ಕಪಕ್ಕದ ಬಟ್ಟೆ ಅಂಗಡಿ ಮತ್ತು ಇತರ ಹಾರ್ಡ್ ವೇರ್ ಅಂಗಡಿಗಳಿಗೆ ಯಾವುದೇ ಹಾನಿಯಾಗಿಲ್ಲ. ಈ ಅಗ್ನಿ ಅವಗಢದಿಂದಾಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿದ್ದು, ಬೆಂಕಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಮುಂದಿನ ತನಿಖೆ ನಡೆಸುತ್ತಿದ್ದಾರೆ.