
ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಸಂಬಂಧಗಳನ್ನ ನೋಡದೇ, ಹಣ ಆಸ್ತಿಗಾಗಿ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ. ಬೆಳೆಯುವವರೆಗೂ ಅಣ್ಣ- ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು ಅನ್ನೋದನ್ನ ಜನರು ಸಾಭೀತುಪಡಿಸುತ್ತಿದ್ದಾರೆ. ಜಮೀನು ವಿವಾದಕ್ಕೆ ಸ್ವಂತದವರ ಮೇಲೆ ಮುಖ ಮೂತಿ ನೋಡದೇ, ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೂ ದಾಯಾದಿಗಳ ನಡುವೆ ಗಲಾಟೆಯಾಗಿರೋದು ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ದಸೂಡಿ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಅಂಬಾರಪುರ ಗ್ರಾಮದಲ್ಲಿ ..
ಹೌದು.. ಅಂಬಾರಪುರ ಗ್ರಾಮದ ಸರ್ವೆ ನಂ 46 ರಲ್ಲಿ ಸುಮಾರು 3 ಎಕರೆ ಜಮೀನು ಗಿರೀಶ್ ನಾಯ್ಕ ಮತ್ತು ದೇವಿಬಾಯಿ ಎಂಬುವರಿಗೆ ಸೇರಿದ್ದಾಗಿದ್ದು, ಅದ್ರಲ್ಲಿ 2 ಎಕರೆ 20 ಗುಂಟೆ ಜಮೀನನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದ್ದು, ಇನ್ನುಳಿದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬರ್ತಿದ್ರು, ಆದ್ರೆ ಇವ್ರ ಮೇಲೆ ಸಂಬಂಧಿಕರಾದ ಹನುಮಾ ನಾಯ್ಕ, ವಿಜಯಮ್ಮ, ಲಕ್ಷ್ಮಿಬಾಯಿ, ಸುಮಲತಾ, ಮಾರುತಿ ಹಾಗೂ ಉಮಾದೇವಿ ಎಂಬುವರು ಬಂದು ಜಮೀನಿನ ವಿಷಯವಾಗಿ ಗಲಾಟೆ ತೆಗಿದಿದ್ದಾರೆ. ಬರೀ ಮಾತಿನಲ್ಲಿ ಗಲಾಟೆ ಮಾಡದೇ ಏಕಾಏಕಿ ಗಿರೀಶ ನಾಯ್ಕ ಕುಟುಂಬದವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹನುಮಾ ನಾಯ್ಕ್ ಚಿತ್ರದುರ್ಗದಿಂದ ಕೆಲವರನ್ನು ಕರೆಸಿಕೊಂಡು ಜಮೀನು ಹಾಗೂ ಕುಟುಂಬದ ಹಳೇ ದ್ವೇಷದ ಹಿನ್ನಲೆ ಗಿರೀಶ್ ನಾಯ್ಕ ಕುಟುಂಬದವ್ರ ಮೇಲೆ ಹಲ್ಲೆ ಮಾಡಿದ್ದಾರೆ, ಈ ವೇಳೆ ಗಿರೀಶ್ ನಾಯ್ಕ ತಲೆಗೆ ಬಲವಾಗಿ ಹೊಡೆದಿದ್ದಾರೆ. ಅಷ್ಟೇ ಅಲ್ದೇ ಆತನ ಪುತ್ರನ ಮೇಲೂ ಹಲ್ಲೆ ನಡೆಸಿದ್ದು, ಕೈ ಮುರಿಯುವಂತೆ ಹೊಡೆದಿದ್ದಾರಂತೆ. ಗಿರೀಶ್ಶ್ ನಾಯ್ಕ ಪತ್ನಿ ಕಳೆದ 4 ವರ್ಷಗಳಿಂದ ಅಂಗನವಾಡಿ ಕೆಲ್ಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಏಕಾಏಕಿ ಬಂದು ಜಮೀನಿನಲ್ಲಿದ್ದ ಕೆಲವು ತೆಂಗಿನ ಗಿಡಗಳನ್ನ ಕಿತ್ತು ಹಾಕಿದ್ದಲ್ಲದೇ, ನಮ್ಮನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ಕುಟುಂಬದವ್ರ ಮೇಲೆ ಹಲ್ಲೆ ಮಾಡಿದ್ದಾರೆ. ನಮಗೆ ಜೀವ ಬೆದರಿಕೆ ಇದೆ, ನಮಗೆ ರಕ್ಷಣೆ ಕೊಡಿ ಎಂದು ಗಿರೀಶ್ ನಾಯ್ಕ್ ದಂಪತಿ ಮನವಿ ಮಾಡಿದ್ರು.
ಅದೇನೆ ಆಗಲಿ ಜಮೀನು ವಿವಾದ ಸಂಬಂಧ ಮಹಿಳೆ ಮಕ್ಕಳು ಅನ್ನೋದನ್ನು ನೋಡದೇ ಹಲ್ಲೆ ಮಾಡಿರೋದು ದುರಂತವೇ ಸರಿ. ಸದ್ಯ ಈ ಸಂಬಂಧವಾಗಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




