
Kantara Chapter 1 Rebel Song OUT : ನಾಳೆ ವಿಶ್ವದಾದ್ಯಾಂತ ಬಿಡುಗಡೆಗೊಳ್ಳುತ್ತಿರುವ ‘ಕಾಂತಾರ ಚಾಪ್ಟರ್ 1’(Kantara Chapter 1) ಸಿನಿಮಾದ ಮತ್ತೊಂದು ಹಾಡು ಇದೀಗ ಬಿಡುಗಡೆಯಾಗಿ ಸಂಚಲನ ಮೂಡಿಸಿದೆ. ‘ರೆಬೆಲ್’ ಎಂಬ ಶೀರ್ಷಿಕೆಯ ಈ ಹಾಡು, ಶೋಷಿತ ಬುಡಕಟ್ಟು ಸಮುದಾಯದ ಹೆದರದ ಧ್ವನಿಯಾಗಿ ಕೇಳಿಬರುತ್ತಿದೆ.
ಹೆಚ್ಚು ಕುತೂಹಲ ಮೂಡಿಸಿದ್ದ ʼಬ್ರಹ್ಮಕಲಶʼ ಹಾಡಿನ ಯಶಸ್ಸಿನ ನಂತರ ಇದೀಗ ಬಿಡುಗಡೆಗೊಂಡಿರುವ ‘ರೆಬೆಲ್’ ಹಾಡು, ಅದರ ಜಾನಪದ ಶೈಲಿ, ಕ್ರಾಂತಿಕಾರಿ ಥೀಮ್ ಹಾಗೂ ಭಾವಪೂರ್ಣ ಸಾಹಿತ್ಯದಿಂದಲೇ ಶ್ರೋತೃಗಳನ್ನು ಸೆಳೆಯುತ್ತಿದೆ.
“ಕಾಡು ಹೇಳಿದೆ ಎಚ್ಚರ… ಕಾಡ ಬೆಂಕಿಯು ಊರ ನೋಡ ಬಂದಿದೆ, ತಡೆ ಯಾರದ್ದು?” ಎಂಬ ಸಾಲು ಈ ಹಾಡಿನ ಭಾವವನ್ನು ಗಾಢವಾಗಿ ಪ್ರತಿಬಿಂಬಿಸುತ್ತಿದೆ. ಶೋಷಣೆಗೆ ವಿರುದ್ಧವಾಗಿ ಎದ್ದು ನಿಲ್ಲುತ್ತಿರುವ ಸಮುದಾಯದ ಹೋರಾಟ, ಭಾವನೆ, ಮತ್ತು ಧೈರ್ಯ – ಎಲ್ಲವೂ ಈ ಹಾಡಿನಲ್ಲಿ ಜೀವಂತವಾಗಿವೆ.
ಇನ್ನು ಈ ಹಾಡು ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಕನ್ನಡದಲ್ಲಿ ಮೈಮ್ ರಾಮ್ದಾಸ್, ಹಿಂದಿಯಲ್ಲಿ ದಿಲ್ಜಿತ್ ದೋಸಾಂಜ್, ಮತ್ತು ಇತರ ಭಾಷೆಗಳಲ್ಲಿ ವಿವಿಧ ಕಲಾವಿದರು ಧ್ವನಿಕೊಟ್ಟಿದ್ದಾರೆ. ದಿಲ್ಜಿತ್ ದೋಸಾಂಜ್ ಅವರ ಧ್ವನಿ ಈ ಜಾನಪದ ಗೀತೆಗೆ PERFECT MATCH ಆಗಿದೆ ಎನ್ನಲಾಗಿದೆ.




