
TUMKUR DASARA 2025: ತುಮಕೂರಿನಲ್ಲಿ ಸೆಪ್ಟೆಂಬರ್ 22 ರಿಂದ ಅದ್ದೂರಿಯಾಗಿ ಪ್ರಾರಂಭವಾದ ದಸರಾ ಕಾರ್ಯಕ್ರಮವು ತುಮಕೂರಿನ ಜನರನ್ನಷ್ಟೆ ಅಲ್ಲದೇ, ಇಡೀ ರಾಜ್ಯದ ಜನರ ಗಮನ ಸೆಳೆಯುತ್ತಿದೆ. ಕಳೆದ 35 ವರ್ಷಗಳಿಂದಲೂ ಈ ದಸರಾ ಸಮತಿಯ ವತಿಯಿಂದ ದಸರಾ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬಾರಿ ದಸರಾ ಸಮಿತಿಯು ಜಿಲ್ಲಾಡಳಿತ ಹಾಗೂ ಪಾಲಿಕೆಯ ಸಹಬಾಗಿತ್ವದಲ್ಲಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದಸರಾ ಮಂಟಪದಲ್ಲಿ ಪ್ರತಿನಿತ್ಯ ಪೂಜೆ-ಹವನ ನಡೆಸುವ ಮೂಲಕ ತಾಯಿ ಚಾಮುಂಡಿ ದೇವಿಯನ್ನು ಆರಾಧಿಸಲಾಗುತ್ತಿದೆ. ಇತ್ತ ದಸರಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಮುಖಂಡರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹೌದು..ದಸರಾ ಸಮಿತಿಯ ಎಲ್ಲರಿಗೂ ಸನ್ಮಾನ ಮಾಡಿ, ದಸರಾ ಕಾರ್ಯಕ್ರಮಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದನ್ನು ಸ್ಮರಿಸುವ ಮೂಲಕ ಅವರನ್ನು ಗೌರಿವಿಸಲಾಯಿತು. ಇದೇ ವೇಳೆ ಕಲಾ ಸರಸ್ವತಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ತುಮಕೂರಿನ ಉದ್ಯಮಿ ರಮೇಶ್ ಬಾಬು ಮಾತನಾಡಿ, ಸಮಿತಿಯವರು ಈ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿಕೊಂಡು ಬರುತ್ತಿರುವುದು ಸಂತಸದ ವಿಷಯ. ನಮ್ಮ ಪೂರ್ವಿಕರು ನಮ್ಮ ಜೀವನ ಶೈಲಿಯನ್ನು ತುಂಬ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಹುಟ್ಟಿನಿಂದ ಸಾಯೋತನಕ ಒಬ್ಬ ಮನುಷ್ಯ ಅತ್ಯಂತ ಸಂತೋಷ ಯಾವ ರೀತಿ ಇರಬೇಕು ಎಂಬುದನ್ನು ಅಚ್ಚುಕಟ್ಟಾಗಿ ಕಟ್ಟಿದ ಸನಾತನ ಋಷಿಮುನಿಗಳ ಕೊಡುಗೆ ಸ್ಮರಣೀಯ ಎಂದರು.
ಬಸವರಾಜ್ ಮಾತನಾಡಿ, ಕಳೆದ 35 ವರ್ಷಗಳಿಂದಲೂ ಈ ದಸರಾ ಸಮಿತಿಯು ಅತ್ಯಂತ ಸಂಭ್ರಮದಿಂದ ದಸರಾವನ್ನು ನಡೆಸಿಕೊಂಡು ಬರುತ್ತಿದ್ದು, ಸೆಪ್ಟೆಂಬರ್ 22 ರಂದು ಶಮೀ ಪೂಜೆಯನ್ನು ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಯಿತು. ಕಳೆದ ಎರಡು ದಿನಗಳಿಂದ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಂಸ್ಕೃತಿ ವೈಭವ ಎಂದು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ತುಮಕೂರಿನ ಹೆಸರಾಂತ ಕಾಲೇಜಾದ ಮಹೇಶ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಶೇಷವಾಗಿ ಯಕ್ಷಗಾನ ಕಲೆಯನ್ನು ಪ್ರದರ್ಶನ ಮಾಡಿದರು. ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ಕಂಡು ನೆರೆದಿದ್ದವರು ಸಂಭ್ರಮಿಸಿದರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೆಸ್ಟ್ ಒಬ್ಬರು ವಿದ್ಯಾರ್ಥಿಗಳ ಕಲೆಯನ್ನು ಹಾಡಿ ಹೊಗಳಿದರು. ವಿದ್ಯಾರ್ಥಿಗಳ ಪ್ರದರ್ಶನಕ್ಕೆ ದಸರಾ ಸಮಿತಿಯ ವತಿಯಿಂದ ಅಭಿನಂದನಾ ಪತ್ರವನ್ನು ನೀಡಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಇನ್ನು ಇದೇ ವೇಳೆ ವಿವಿಧ ಶಾಲಾ-ಕಾಲೇಜಿನ ಕಲಾತಂಡಗಳು ಕೂಡ ಭಾಗಿಯಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.




