MYSURU DASARA 2025 : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅತಿ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಈಗ ಎರಡು ದಿನ ಮಾತ್ರ ಬಾಕಿಯಿದ್ದು, ಇಂದು ಬೆಳಿಗ್ಗೆ ಮೈಸೂರು ಅರಮನೆಯ ಅಂಬಾವಿಲಾಸ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ಅಂತಿಮ ತಾಲೀಮು ವಿಜೃಂಭಣೆಯಿಂದ ನಡೆಯಿತು.
ಅಭಿಮನ್ಯು ನೇತೃತ್ವದ 14 ಗಜಪಡೆಗಳು ಈ ರಿಹರ್ಸಲ್ನಲ್ಲಿ ಭಾಗವಹಿಸಿದ್ದವು. ಇನ್ನು ಅಶ್ವರೋಹಿ ದಳದೊಂದಿಗೆ ಪೊಲೀಸ್ ವಾದ್ಯವೃಂದ ಮತ್ತು ವಿವಿಧ ಇಲಾಖೆಗಳ ತುಕ್ಕಡಿ ಪಡೆಗಳು ಕೂಡ ಮೆರವಣಿಗೆಯಲ್ಲಿ ತಮ್ಮ ಕಲಾತ್ಮಕ ತಯಾರಿ ಪ್ರದರ್ಶಿಸಿದವು. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಎಡಭಾಗದಲ್ಲಿ ಕುಂಕಿ ಆನೆಯಾಗಿ ಕಾವೇರಿ, ಬಲ ಭಾಗದಲ್ಲಿ ರೂಪ ಸಾಥ್ ನೀಡಿದವು.ನಿಶಾನಿಯಾಗಿ ದನಂಜಯ, ನೌಪಾದ್ ಆನೆಯಾಗಿ ಗೋಪಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಒಂದನೇ ಹಂತದ ಸಾಲಾನೆಯಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ ಇದ್ದವು. ಎರಡನೇ ಹಂತದ ಸಾಲಾನೆಯಾಗಿ ಕಂಜನ್, ಭೀಮ, ಏಕಲವ್ಯ ಹಾಗೂ ಮೂರನೇ ಹಂತದ ಸಾಲಾನೆಯಾಗಿ ಪ್ರಶಾಂತ, ಸುಗ್ರೀವ, ಹೇಮಾವತಿ ಆನೆಗಳು ಮೆರವಣಿಗೆಯ ರಿಹರ್ಸಲ್ನಲ್ಲಿ ಭಾಗಿಯಾದವು.