Kantara-1 Chennai pre-release event cancelled : ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನ ಮಾಡಿದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ ಚಾಪ್ಟರ್ 1’ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಹಿನ್ನೆಲೆ ದೇಶದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡ, ಇತ್ತೀಚೆಗೆ ಹೈದರಾಬಾದ್ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಟಾಲಿವುಡ್ ಸ್ಟಾರ್ ಜೂ. NTR ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಷಬ್ ಶೆಟ್ಟಿ ಕನ್ನಡದಲ್ಲಿಯೇ ಮಾತನಾಡಿ ಎಲ್ಲರ ಗಮನ ಸೆಳೆದರು.
ಈ ನಂತರ, ಚೆನ್ನೈನಲ್ಲಿ ಮತ್ತೊಂದು ಭರ್ಜರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ತಮಿಳು ಚಿತ್ರರಂಗದ ಪ್ರಮುಖ ನಟರನ್ನು ಆಹ್ವಾನಿಸಲಾಗಿದ್ದು, ಅಭಿಮಾನಿಗಳಲ್ಲಿ ತೀವ್ರ ಉತ್ಸಾಹವಿತ್ತು. ಆದರೆ, ದಳಪತಿ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮವನ್ನು ತುರ್ತಾಗಿ ರದ್ದುಗೊಳಿಸಲಾಗಿದೆ.
ತಮಿಳುನಾಡಿನ ಕರೂರಿನಲ್ಲಿ ನಡೆದ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ನೂಕುನುಗ್ಗಲು ಸಂಭವಿಸಿ, 40 ಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೊಳಗಾಗಿದ್ದಾರೆ. ಈ ದುರ್ಘಟನೆ ರಾಜ್ಯವ್ಯಾಪಿ ಶೋಕಾಂತರ ಉಂಟುಮಾಡಿದ್ದು, ತೀವ್ರ ತನಿಖೆ ಆರಂಭಿಸಲಾಗಿದೆ. ಇದೀಗ ವಿಜಯ್ ಅವರ ವಿರುದ್ಧ ಬಂಧನದ ಬೇಡಿಕೆಗಳೂ ಕೇಳಿಬರುತ್ತಿವೆ. ಹೀಗಿರುವಾಗ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ ಎಂಬ ನಿರ್ಣಯಕ್ಕೆ ಬಂದು ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಈ ಬಗ್ಗೆ ಹೊಂಬಾಳೆ ಫಿಲಮ್ಸ್ ಪ್ರಕಟಣೆ ಹೊರಡಿಸಿದ್ದು ಇತ್ತೀಚೆಗೆ ನಡೆದ ದುರ್ಘಟನೆಯ ಕಾರಣದಿಂದಾಗಿ ಚೆನ್ನೈನಲ್ಲಿ ಆಯೋಜಿಸಿದ್ದ ‘ಕಾಂತಾರ ಚಾಪ್ಟರ್ 1’ ಪ್ರೀ ರಿಲೀಸ್ ಇವೆಂಟ್ ಅನ್ನು ನಾವು ರದ್ದುಪಡಿಸಿದ್ದೇವೆ. ಸಂತ್ರಸ್ತರ ನೋವಿನ ಜೊತೆ ನಿಲ್ಲುವ ಸಮಯ ಇದಾಗಿದೆ. ಈ ದುರ್ಘಟನೆಯಲ್ಲಿ ಹಾನಿಗೆ ಒಳಗಾದ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪಗಳು. ತಮಿಳುನಾಡಿನ ಜನರ ಪ್ರೀತಿ ಹಾಗೂ ಸಹಾನುಭೂತಿಯಿಗೆ ನಾವು ಸದಾ ಋಣಿಯಾಗಿದ್ದೇವೆ. ಅವರನ್ನು ಚಿತ್ರಮಂದಿರಗಳಲ್ಲಿ ಭೇಟಿಯಾಗಲು ನಾವು ನಿರೀಕ್ಷಿ ಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇನ್ನು 2022ರಲ್ಲಿಯ ‘ಕಾಂತಾರ’ ಮೊದಲ ಭಾಗ ತಮಿಳುನಾಡಿನಲ್ಲಿ ಭರ್ಜರಿ ಯಶಸ್ಸು ಕಂಡು, ಸಾವಿರಾರು ತಮಿಳು ಪ್ರೇಕ್ಷಕರ ಮನ ಗೆದ್ದಿತ್ತು. ರಜನೀಕಾಂತ್ ಅವರಂತು ವೈಯಕ್ತಿಕವಾಗಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಆಹ್ವಾನಿಸಿ, ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದರು. ಈ ಬಾರಿಯೂ ಸಹ ತಮಿಳುನಾಡಿನಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಚಿತ್ರತಂಡದ್ದು.