
ICC Women’s ODI World Cup 2025: ಐಸಿಸಿ (ICC) ಮಹಿಳಾ ಕ್ರಿಕೆಟ್ ವಿಶ್ವಕಪ್ನ 13ನೇ ಆವೃತ್ತಿಯು ಸೆಪ್ಟೆಂಬರ್ 30, ಮಂಗಳವಾರದಿಂದ ಲಂಕಾ ಮತ್ತು ಭಾರತದ ಜಂಟಿ ಆತಿಥ್ಯದಲ್ಲಿ ಭರ್ಜರಿಯಾಗಿ ಆರಂಭವಾಗಲಿದೆ. ಹರ್ಮನ್ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ (Team india) ಈ ಬಾರಿಗೆ ಚೊಚ್ಚಲ ವಿಶ್ವಕಪ್(World cup) ಕಿರೀಟದ ಕನಸು ಕಂಡಿದೆ.
ಮಂಗಳವಾರ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯವೇ ಭಾರತ ಮತ್ತು ಶ್ರೀಲಂಕಾ ನಡುವಿನ ಹೋರಾಟವಾಗಿದ್ದು, ಪಂದ್ಯಾವಳಿಗೆ ಸಜ್ಜಾಗಿದೆ. ಈ ಬಾರಿ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ಟೂರ್ನಿಯು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡವು ಉಳಿದ ಎಲ್ಲ ತಂಡಗಳೊಂದಿಗೆ ಒಂದು ಪಂದ್ಯವನ್ನ ಸಮವಾಗಿ (each) ಆಡಲಿದೆ.
ಲೀಗ್ ಹಂತದ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ಗೆ ಪ್ರವೇಶ ಪಡೆಯಲಿದ್ದು, ಲೀಗ್ ಪಂದ್ಯಗಳಿಗೆ ಯಾವುದೇ ಮೀಸಲು ದಿನವಿಲ್ಲ. ಮಳೆಗೆ ಅಥವಾ ಇತರೆ ಕಾರಣಗಳಿಗೆ ಪಂದ್ಯ ನಡೆಯದಿದ್ದರೆ, ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ. ಸೆಮಿಫೈನಲ್ ಹಾಗೂ ಫೈನಲ್ಗಳಿಗೆ ಮಾತ್ರ ಮೀಸಲು ದಿನ ಇರಲಿದೆ. ಯಾವುದೇ ಪಂದ್ಯ ಟೈಗೊಂಡರೆ, ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲಾಗುತ್ತದೆ.
ಟೀಂ ಇಂಡಿಯಾ ಈವರೆಗೂ ಮಹಿಳಾ ವಿಶ್ವಕಪ್ ಕಿರೀಟ ಗೆದ್ದಿಲ್ಲ, ಆದರೆ ಈ ಬಾರಿಗೆ ಅನುಭವಸಂಪನ್ನ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ನೇತೃತ್ವದಲ್ಲಿ, ತಂಡವು ಶ್ರೇಷ್ಠ ಪ್ರದರ್ಶನ ನೀಡುವ ನಿರೀಕ್ಷೆಯಿದೆ.




