
Mysuru Dasara Drone Show : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಈ ಬಾರಿಗೆ ಅತ್ಯಾಕರ್ಷಕ ತಂತ್ರಜ್ಞಾನದೊಂದಿಗೆ ಮೂಡಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಡ್ರೋನ್ ಪ್ರದರ್ಶನ ದಸರಾ ಮಹೋತ್ಸವಕ್ಕೆ ಹೊಸ ಮೆರುಗು ನೀಡಿದ್ದು, ಪ್ರೇಕ್ಷಕರಿಗೆ ರೋಮಾಂಚನಕರ ಅನುಭವ ನೀಡಿತು.
ಈ ಬಾರಿಯ ವಿಶೇಷವೆಂದರೆ 3,000 ಡ್ರೋನ್ಗಳ (Drone) ಮೂಲಕ ಆಕರ್ಷಕ ಚಿತ್ತಾರ ಪ್ರದರ್ಶನ. 2,983 ಡ್ರೋನ್ಗಳನ್ನು ಬಳಸಿಕೊಂಡು ರಾಷ್ಟ್ರೀಯ ಪ್ರಾಣಿ ಹುಲಿಯ ಬೃಹದಾಕಾರದ ಕಲಾಕೃತಿಯನ್ನು ಬಾನಂಗಳದಲ್ಲಿ ಸೃಷ್ಟಿಸಲಾಯಿತು. ಈ ಮೂಲಕ ಗಿನ್ನಿಸ್ (Guinness World Record) ವಿಶ್ವದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಈ ಹೊಸ ದಾಖಲೆ ಮುಂಚಿನ 1,985 ಡ್ರೋನ್ಗಳ ಬಳಕೆಯ ಹಳೆ ದಾಖಲೆಯನ್ನು ಮುರಿದಿದೆ. ಕಳೆದ ವರ್ಷ 1,500 ಡ್ರೋನ್ಗಳು ಭಾಗವಹಿಸಿದ್ದರೆ, ಈ ಬಾರಿಯ ಪ್ರದರ್ಶನದಲ್ಲಿ 3,000 ಡ್ರೋನ್ಗಳು ಹಾರಾಡಿದವು. ಡ್ರೋನ್ಗಳು ಬಾನಂಗಳದಲ್ಲಿ ಬಣ್ಣಬಣ್ಣದ ಬೆಳಕುಗಳಿಂದ ಚಾಮುಂಡೇಶ್ವರಿ ದೇವಿ, ಹುಲಿ, ಕರ್ನಾಟಕ ನಕ್ಷೆ, ಮೈಸೂರು ಅರಮನೆ ಮುಂತಾದ ಚಿತ್ರಗಳನ್ನು ಮೂಡಿಸಿತು. ಏಕಕಾಲದಲ್ಲಿ ಬಾನೆತ್ತರ ಹಾರಿದ ಡ್ರೋನ್ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದವು.




