
Heavy Rain Effect IN Bagalakote : ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ 321 ಮನೆಗಳ ಕುಸಿತ ಹಾಗೂ ಸುಮಾರು 5,000 ಎಕರೆಯ ಈರುಳ್ಳಿ ಬೆಳೆ ನಾಶ ಎಂಬ ಭೀಕರ ಪರಿಣಾಮವನ್ನುಂಟು ಮಾಡಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸೆಪ್ಟೆಂಬರ್ 26ರಂದು ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಮನೆಯೊಂದರ ಕುಸಿತದಿಂದ ಒಬ್ಬ ಯುವಕನು ಮೃತಪಟ್ಟಿದ್ದಾನೆ. ಇತ್ತ ಇಳಕಲ್ ತಾಲೂಕಿನಲ್ಲಿ ಮಾತ್ರ ಕಳೆದ 2 ದಿನಗಳಲ್ಲಿ 35ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನಲ್ಲಿ ಬೂದಿಹಾಳ ಎಸ್.ಕೆ. – 3 ಮನೆಗಳು, ಬೆನಕನಡೋಣಿ – 5 ಮನೆಗಳು, ಹಿರೇಕೊಡಗಲಿ – 3 ಮನೆಗಳು, ಕಂಬಳಿಹಾಳ – 1 ಮನೆ, ತಳ್ಳಿಕೇರಿ – 7 ಮನೆಗಳು, ಗುಡೂರ ಎಸ್.ಬಿ. – 1 ಮನೆ, ಅಮರವಾಡಗಿ – 3 ಮನೆಗಳು, ಕೆಲೂರು – 6 ಮನೆಗಳು, ಗೊರಜನಾಳ – 1 ಮನೆ ಸೇರಿದಂತೆ ಗುಡೂರ ಎಸ್.ಸಿ. – 5 ಮನೆಗಳು ಮಳೆಯಿಂದ ಹಾನಿಗೊಳಗಾಗಿದೆ.
ಇನ್ನು ಸೆಪ್ಟೆಂಬರ್ 21 ರಿಂದ 27 ರವರೆಗೆ 40 ಮಿ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಎರಡು ದಿನಗಳಲ್ಲಿ 93.34 ಮಿ.ಮೀ ಮಳೆಯಾಗಿದ್ದು, ಶೇ. ೧೬೦ ರಷ್ಟು ಅಧಿಕ ಮಳೆಯಿಂದಾಗಿ ಮನೆ ಕುಸಿತ, ಬೆಳೆ ಹಾನಿ ಸಂಭವಿಸಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.




