
BANGALORE ACCIDENT: ರಾಜಧಾನಿ ಬೆಂಗಳೂರು ಹೊರವಲಯದ ಜಿಗಣಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಎಂಟಿಸಿ (BMTC) ಗುತ್ತಿಗೆ ಚಾಲಕ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ರಾಯಚೂರು ಮೂಲದ 35 ವರ್ಷದ ಮಲ್ಲಿಕಾರ್ಜುನ ಎಂಬುವರು ಮೃತ ದುರ್ದೈವಿಯಾಗಿದ್ದಾರೆ. ಅವರು ಬಿಎಂಟಿಸಿ ಡಿಪೋಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಇನ್ನು ಜಿಗಣಿ ಡಬಲ್ರೋಡ್ ಬಳಿ ಅವರು ಬಿಎಂಟಿಸಿ ಡಿಪೋಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ, ತಮಿಳುನಾಡು ರಿಜಿಸ್ಟ್ರೇಷನ್ನ ‘ಇನ್ನೋವಾ’ ಕಾರು ಅತಿವೇಗದಿಂದ ಬಂದು ಮಲ್ಲಿಕಾರ್ಜುನ ಅವರಿಗೆ ಡಿಕ್ಕಿ ಹೊಡೆದು ನಂತರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ಮಲ್ಲಿಕಾರ್ಜುನ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಸದ್ಯ ಘಟನೆಯ ನಂತರ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕೆ ತನಿಖೆ ನಡೆಯುತ್ತಿದೆ.




