ಯೋಗೇಶ್ ಗೌಡ ಹತ್ಯೆ ಕೇಸ್ – Vinay Kulkarni ಸೇರಿ 17 ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿಯನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದೆ. ಇಂದು ಅಪರಾಧಿಗಳ ವಾದವನ್ನು ನ್ಯಾಯಾಲಯ ಆಲಿಸಿತ್ತು. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರ ಪೀಠವು ಎಲ್ಲರ ವಾದ ದಾಖಲಿಸಿಕೊಂಡು, ಶಿಕ್ಷೆಯ ಪ್ರಮಾಣದ ಸಂಬಂಧದ ತೀರ್ಪನ್ನು ನಾಳೆ ಪ್ರಕಟಿಸುವುದಾಗಿ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ನಿನ್ನೆ (ಏಪ್ರಿಲ್ 15) ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿತ್ತು. ತೀರ್ಪು ಹೊರಬಿದ್ದ ಕೂಡಲೇ ಸಿಬಿಐ ಅಧಿಕಾರಿಗಳು ಎಲ್ಲಾ ಅಪರಾಧಿಗಳನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದರು. ನ್ಯಾಯಾಲಯದ ಆವರಣ ಹಾಗೂ ಧಾರವಾಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್ನಲ್ಲಿ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ಪ್ರಕರಣದಲ್ಲಿ ರಾಜಕೀಯ ಪ್ರಭಾವದ ಆರೋಪಗಳು ಕೇಳಿಬಂದಿದ್ದರಿಂದ ನಂತರ ಸಿಬಿಐಗೆ ತನಿಖೆ ವಹಿಸಲಾಯಿತು.
READ THIS : ತಾಯಿಯನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಕೊಂದ ಪಾಪಿ ಮಗ!
ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ
ಸಿಬಿಐ ತನಿಖೆಯಲ್ಲಿ ರಾಜಕೀಯ ದ್ವೇಷವೇ ಹತ್ಯೆಯ ಪ್ರಮುಖ ಕಾರಣವೆಂದು ಪತ್ತೆಯಾಗಿದೆ. 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಅವರು ಸುಮಾರು 9 ತಿಂಗಳು ಜೈಲು ವಾಸ ಅನುಭವಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದು ಬಿಡುಗಡೆಯಾದರೂ, ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು.

ಸಿಬಿಐ ವಾದ
ವಿಚಾರಣೆ ವೇಳೆ ಸಿಬಿಐ ಪರ ವಕೀಲರು ಕೊಲೆ ಸಂಚು, ಸಾಕ್ಷ್ಯ ನಾಶ ಮತ್ತು ರಾಜಕೀಯ ಪ್ರಭಾವದ ಬಳಕೆಗೆ ಸಂಬಂಧಿಸಿದ ಬಲವಾದ ಸಾಕ್ಷ್ಯಗಳು ಹಾಗೂ ಆಡಿಯೋ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನಾಳೆಯ ತೀರ್ಪಿನ ಕುತೂಹಲ
ಇಂದು ನಡೆದ ವಾದದಲ್ಲಿ ಅಪರಾಧಿಗಳ ಪರ ವಕೀಲರು ಶಿಕ್ಷೆಯನ್ನು ಕಡಿಮೆ ಮಾಡಲು ಮನವಿ ಮಾಡಿದರು. ಆದರೆ ಸಿಬಿಐ ಪರ ವಕೀಲರು ಕಠಿಣ ಶಿಕ್ಷೆಗೆ ಒತ್ತಾಯಿಸಿದರು. ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ತೀರ್ಪು ಕುರಿತು ಕುತೂಹಲ ಮೂಡಿದೆ.
MUST WATCH : ಬೆಂಗಳೂರಿನಲ್ಲಿ LOVE JIHAD ಆರೋಪ – ಯುವತಿಗೆ ಮನಬಂದಂತೆ ಥಳಿಸಿದ್ನಾ.?





