Belagavi : ಯವಕನ ಜೊತೆಗೆ ಓಡಿ ಹೋಗಿದ್ದಕ್ಕೆ ಸಂಬಂಧಿಕರೇ ಯುವತಿಗೆ ವಿಷ ಕುಡಿಸಿ ಕೊಂದು ಹಾಕಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಒಂದು ಮರ್ಯಾದಾ ಹತ್ಯೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೆ, ರಾಜ್ಯ ಸರ್ಕಾರ ಮರ್ಯಾದಾ ಹತ್ಯೆ ತಡೆಗೆ ಕಾನೂನು ಜಾರಿ ಮಾಡಿದ್ದರೂ ಇದೀಗ ಬೆಳಗಾವಿಯಲ್ಲಿ (Belagavi) ಮತ್ತೊಂದು ಅಂಥದೇ ಪ್ರಕರಣ ಬೆಳಕಿಗೆ ಬಂದಿದೆ.
ವಿಷ ಕುಡಿಸಿ ಯುವತಿಯ ಕೊಲೆ
ಪ್ರಿಯಕರನ ಜೊತೆ ಓಡಿ ಹೋಗಿದ್ದ ಕಾರಣಕ್ಕೆ ಸಂಬಂಧಿಕರೇ ಯುವತಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಸತ್ಯವ್ವ ಎಂದು ಗುರುತಿಸಲಾಗಿದೆ.

ನಡೆದಿದ್ದೇನು..?
ಫೆಬ್ರವರಿ 17ರಂದು ಸತ್ಯವ್ವ ತನ್ನ ಪ್ರಿಯಕರ ಕೃಷ್ಣನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ನಂತರ ಸೌದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು.
ಸುಮಾರು 15 ದಿನಗಳ ಬಳಿಕ ಕುಟುಂಬದ ಸದಸ್ಯರು ಇಬ್ಬರನ್ನೂ ವಾಪಸ್ ಕರೆತಂದಿದ್ದರು. ಎರಡು ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು.
ಆದರೆ, ನಂತರ ಸತ್ಯವ್ವಳ ಅಣ್ಣ ಆಕೆಯನ್ನು ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಿದ್ದಾನೆ. ಈ ವೇಳೆ ಕೃಷ್ಣನನ್ನು ಮರೆತು ಬಿಡುವಂತೆ ಕುಟುಂಬಸ್ಥರು ಆಕೆಯ ಮೇಲೆ ಒತ್ತಡ ಹೇರಿದ್ದರು. ಆದರೆ ಸತ್ಯವ್ವ ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ.
ಮಾರ್ಚ್ 21ರಂದು ಸತ್ಯವ್ವಗೆ ವಿಷ ಕುಡಿಸಿ ಹತ್ಯೆ ಮಾಡಲಾಗಿದ್ದು, ಬಳಿಕ ಸಾಕ್ಷಿ ನಾಶ ಮಾಡಲು ಶವವನ್ನು ಸುಟ್ಟು ಹಾಕಲಾಗಿದೆ. ಶವದ ಜೊತೆಗೆ ಹಾಸಿಗೆ ಬಟ್ಟೆಗಳನ್ನೂ ಸುಟ್ಟು ಹಾಕಿರುವುದಾಗಿ ತಿಳಿದುಬಂದಿದೆ.
READ THIS : ಸತತ ಸೋಲಿನಿಂದ ಕಂಗೆಟ್ಟ KKR ನಾಯಕ ಅಜಿಂಕ್ಯ ರಹಾನೆಗೆ ದಂಡದ ಬರೆ..!

ಶವ ಸುಟ್ಟು ಮೂವರೂ ಊರಿಗೆ ವಾಪಸ್
ಈ ಕೃತ್ಯದಲ್ಲಿ ಸತ್ಯವ್ವಳ ಅಣ್ಣ ಶಾನೂರ, ಚಿಕ್ಕಪ್ಪಪ್ರಕಾಶ ಹಾಗೂ ಭಾವ ಕಲ್ಲಪ್ಪ ಭಾಗಿಯಾಗಿದ್ದು, ಶವವನ್ನು ಮಹಾರಾಷ್ಟ್ರದಲ್ಲೇ ದಹನ ಮಾಡಿ ನಂತರ ಊರಿಗೆ ವಾಪಸ್ ಬಂದಿದ್ದಾರೆ ಎನ್ನಲಾಗಿದೆ.
ತಂಗಿ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಕ್ಕೆ ಕೊಲೆ ಮಾಡಿದ್ದೇವೆ
ಇದರಿಂದ ಸಂಶಯಗೊಂಡ ಪ್ರಿಯಕರ ಕೃಷ್ಣ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆ ವೇಳೆ ತಂಗಿ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಕ್ಕೆ ಕೊಲೆ ಮಾಡಿದ್ದೇವೆ ಎಂದು ಸತ್ಯವ್ವಳ ಅಣ್ಣ ಶಾನೂರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಘಟನೆ ಸಂಬಂಧ ಶಾನೂರ ಪ್ರಕಾಶ ಮತ್ತು ಕಲ್ಲಪ್ಪನನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ.
MUST WATCH : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬೆಂಕಿ ಅವಘಡ ಧಗ ಧಗನೆ ಹೊತ್ತಿ ಉರಿದ ಕಸದ ರಾಶಿ




