
BAGALKOT HOUSE WALL COLLAPSES : ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಒಂದು ಮನೆ ಗೋಡೆ ತಡರಾತ್ರಿ ಸುರಿದ ಮಳೆಯಿಂದ ಕುಸಿದು 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಮೃತ ಬಾಲಕನನ್ನು ದರ್ಶನ್ ನಾಗಪ್ಪ ಲಾತೂರ ಎಂದು ಗುರುತಿಸಲಾಗಿದೆ. ಇನ್ನು ದರ್ಶನ್ನ ಸಹೋದರ ಶ್ರೀಶೈಲ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದರ್ಶನ್ ಕುಟುಂಬವು ಪತ್ರಾಸ್ ಮನೆಯಲ್ಲಿ ವಾಸಿಸುತ್ತಿದ್ದು, ಇಂದು ಬೆಳಗಿನ ಜಾವ 5 ಗಂಟೆಯ ಸಮಯದಲ್ಲಿ ಇವರ ಬದಿಯ ಮನೆಯ ಗೋಡೆ ಕುಸಿದು ಪತ್ರಾಸ್ ಮೇಲೆ ಬಿದ್ದಿದೆ. ಪತ್ರಾಸ್ ಕೆಳಗೆ ಮಲಗಿದ್ದ ಬಾಲಕ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಾಲಕನ ತಾಯಿ ರೂಪಾ, ಸಹೋದರಿ ಅದೃಷ್ಟವಶಾತ್ ಪಾರಾಗಿದ್ದಾರೆ. ಬಾಲಕನ ತಂದೆ ನಾಗಪ್ಪ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಪಿಎಸ್ಐ ಕಿರಣ ಸತ್ತಿಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.




