
SOCIAL EDUCATIONAL SURVEY IN KARNATAKA: ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ತಾಂತ್ರಿಕ ತೊಂದರೆಗಳಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳೊಂದಿಗೆ ಸಭೆ ನಡೆಸಿ ಸಮೀಕ್ಷೆಗೆ ಚುರುಕು ತರುವಂತೆ ಸೂಚನೆ ನೀಡಿದ್ದಾರೆ.
ಇನ್ನು ಸಿಎಂ ಮಾತನಾಡಿ “ಈ ಸಮೀಕ್ಷೆಯಲ್ಲಿ 7 ಕೋಟಿ ಜನರನ್ನು ಒಳಗೊಂಡಂತೆ ಮಾಹಿತಿ ಸಂಗ್ರಹಿಸುವುದು ನಮ್ಮ ಗುರಿ. ಕಳೆದ ನಾಲ್ಕು ದಿನಗಳಲ್ಲಿ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಕೆಲಸ ಕುಂಠಿತವಾಗಿತ್ತು. ಆದರೆ ಈಗ ಜಿಲ್ಲಾಧಿಕಾರಿಗಳ ವರದಿ ಪ್ರಕಾರ, 90% ತಾಂತ್ರಿಕ ತೊಂದರೆಗಳು ಪರಿಹಾರವಾಗಿವೆ. ಉಳಿದವುಗಳೂ ಇಂದೇ ಪರಿಹಾರಗೊಳ್ಳಲಿವೆ” ಎಂದು ತಿಳಿಸಿದ್ದಾರೆ.
ಇನ್ನು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರೊಳಗೆ ಸಮೀಕ್ಷೆ ಪೂರ್ಣಗೊಳ್ಳಬೇಕೆಂದು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗಕ್ಕೂ ಸೂಚನೆ ನೀಡಿರುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ. “ನಾಲ್ಕು ದಿನ ಸರ್ವೆ ವಿಳಂಬವಾಗಿದ್ದು, ಉಳಿದ ದಿನಗಳಲ್ಲಿ ಕವರ್ ಮಾಡುವ ಗುರಿ ಹೊಂದಿದ್ದೇವೆ. ಪ್ರತಿ ದಿನ ಕನಿಷ್ಟ 10% ಕುಟುಂಬಗಳ ಸರ್ವೆ ನಡೆಯಬೇಕು ಎಂಬ ನಿರ್ಧಾರಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ” ಎಂದರು.
ಶಿಕ್ಷಕರು ಈ ಕಾರ್ಯದಲ್ಲಿ ಭಾಗವಹಿಸಲು ಅವರು ತಪ್ಪು ಕಲ್ಪನೆಯಿಂದ ತಿರಸ್ಕರಿಸುತ್ತಿದ್ದರು. ಈಗ ಎಲ್ಲರೂ ಸಹಕರಿಸಲು ಒಪ್ಪಿದ್ದಾರೆ. ಇಂದಿನಿಂದಲೇ ಕಾರ್ಯ ಚುರುಕಾಗಿದೆ” ಎಂದು ತಿಳಿಸಿದರು. ಅಲ್ದೇ ಈ ಬಗ್ಗೆ DC, ಜಿಲ್ಲಾ ಪಂಚಾಯತ್ CEOಗಳಿಗೆ ಗಂಭೀರ ಸೂಚನೆ ನೀಡಿದ್ದು, ಪ್ರತಿದಿನ ಪ್ರಗತಿ ಪರಿಶೀಲನೆ ಸಭೆ ನಡೆಸುವಂತೆ ತಿಳಿಸಿದ್ದಾರೆ. “ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸರ್ವೆ ಕಾರ್ಯವನ್ನು ನಿಗಾ ಇರಿಸಬೇಕು” ಎಂದು ತಿಳಿಸಿದ್ದಾರೆ.
ಈ ಸಮೀಕ್ಷೆಯು ರಾಜ್ಯದ ಜನಸಾಂಖ್ಯಿಕ, ಶೈಕ್ಷಣಿಕ, ಸಾಮಾಜಿಕ ಹಿನ್ನಲೆಯಲ್ಲಿ ಮಾಹಿತಿ ಸಂಗ್ರಹಿಸಲು ಮತ್ತು ಹಿಂದುಳಿದ ವರ್ಗಗಳಿಗೆ ಉತ್ತಮ ಯೋಜನೆ ರೂಪಿಸಲು ಸರ್ಕಾರದ ಮಹತ್ವದ ಹೆಜ್ಜೆಯಾಗಿದ್ದು, ಅದನ್ನು ಯಶಸ್ವಿಯಾಗಿ ನಡೆಸುವುದು ಅಗತ್ಯ ಎಂದು ಸಿಎಂ ಹೇರಳವಾಗಿ ಒತ್ತಾಯಿಸಿದ್ದಾರೆ.




