
ಶಿರಾ ನಗರದಲ್ಲಿ ಬಡವರಿಗಾಗಿ ವಸತಿ ಯೋಜನೆಯಡಿಯಲ್ಲಿ ವಸತಿಗಳನ್ನು ನಿರ್ಮಾಣ ಮಾಡಲಾಗಿತ್ತು, ಆದ್ರೆ ಈ ವಸತಿಗಳು ಕಳೆದ ಏಳೆಂಟು ವರ್ಷಗಳಿಂದ ಅನುಷ್ಠಾನಗೊಳ್ಳದೇ ಸ್ಥಗಿತಗೊಂಡಿತ್ತು. ಈ ಬಗ್ಗೆ ಹಲವು ಬಾರಿ ಶಾಸಕರ ಗಮನಕ್ಕೂ ತರಲಾಗಿತ್ತು. ಈ ಬೆನ್ನಲ್ಲೇ ಶಿರಾ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿ ನಿಧಿಯಾದ ಜಯಚಂದ್ರ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಶೀಘ್ರವೇ ಶಿರಾ ನಗರದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ತ್ವರಿತ ವಾಗಿ ಪೂರ್ಣಗೊಳಿಸಲು ನಿರ್ಧಾರಮಾಡಲಾಗಿದೆ.
ನಿನ್ನೆ ಬೆಂಗಳೂರಿನ ವಿಧಾನ ಸೌಧದಲ್ಲಿ ಶಾಸಕ ಜಯಚಂದ್ರ ಅವರು ಸಭೆ ಕರೆಯಲಾಗಿದ್ದು, ಸಭೆಯಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ಕೆ.ಪಿ. ಮೋಹನ್ರಾಜ್, ರಾಜೀವ್ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪರಶುರಾಮ ಶಿನ್ನಾಳಕರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಅಶೋಕ್, ತುಮಕೂರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ರಾಜಶೇಖರ್ಸೇರಿದಂತೆ ವಸತಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ವಸತಿ ಯೋಜನೆ ಸಂಬಂಧ ಚರ್ಚೆ ನಡೆಸಲಾಗಿತ್ತು. ಇನ್ನು ಸಭೆಯಲ್ಲಿ ಶಿರಾ ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ಮೂರು ಅಂತಸ್ತಿನ 1000 ಮನೆಗಳ ಯೋಜನೆ ನೆನೆಗುದಿಗೆ ಬಿದ್ದಿದ್ದು, ಬೀಡಿ ಕಾರ್ಮಿಕರಿಗೆ ಹಂಚಿಕೆಯಾಗಿರುವ 282 ಮನೆಗಳಲ್ಲಿ 69 ಮನೆಗಳಿಗೆ ಹಣ ಕಾಸು ವರ್ಗಾವಣೆ ಬಾಕಿ ಇದೆ.
ಒಂಟಿ ಮನೆ ಯೋಜನೆಯಡಿ ಏಳು ಮನೆಗಳು ಅಪೂರ್ಣಗೊಂಡಿವೆ. ಮನೆಗಳು ಪೂರ್ಣಗೊಳ್ಳದೆ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ತ್ವರಿತವಾಗಿ ಹಣಕಾಸು ಒದಗಿಸಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಶಾಸಕರ ಸೂಚನೆಗೆ ಅತಿ ಶೀಘ್ರದಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲು ಕ್ರಮಕೈಗೊಳ್ಳುವುದಾಗಿ ವಸತಿ ಇಲಾಖೆ ಅಧಿಕಾರಿಗಳು ಇದೇ ವೇಳೆ ಭರವಸೆ ನೀಡಿದರು.




