
ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ 1 ರಲ್ಲಿ ಬೇರೆ ಸಮುದಾಯದವರು ಎಸ್ಟಿ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಹಾಗೂ ಅನ್ಯ ಜಾತಿಗಳನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾದ ಸರ್ಕಾರ ನಿಲುವು ಸರಿಯಲ್ಲ ಎಂದು ವಿರೋಧಿಸಿ, ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು , ಸದಸ್ಯರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಬಂದ ವಾಲ್ಮೀಕಿ ಸಮಾಜದ ಬಂಧುಗಳು ಬುಡಕಟ್ಟಿನ ಪರ್ಯಾಯ ಹೆಸರುಗಳಾದ ಪರಿವಾರ, ತಳವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಉತ್ತರ ಕರ್ನಾಟಕದ ಹಲವು ಜಿಲ್ಲೆಯ ಹಿಂದುಳಿದ ವರ್ಗಗಳ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗಳನ್ನು ನಾಯಕ ತಳವಾರ ಹೆಸರಿನಲ್ಲಿ, 2 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದು ಸರ್ಕಾರದ ಸವಲತ್ತು ಪಡೆದಿದ್ದಾರೆ. ಈ ವಾಮಮಾರ್ಗದ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಹಗಲು ದರೋಡೆಗೆ ಕಡಿವಾಣ ಹಾಕಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ಎಚ್.ಆರ್.ರಾಮಚಂದ್ರಪ್ಪ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಬಗ್ಗೆ, ನ್ಯಾಯಾಲಯದ ಮೆಟ್ಟಿಲೇರಿ ಕ್ರಮಕೈಗೊಂಡ ಬಗ್ಗೆ ಆದೇಶ ನೀಡಿದ್ದರೂ, ಒಂದು ವರ್ಷ ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ. ಈಗಾಗಲೇ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ರೀತಿ ಮೀಸಲಾತಿ ಪಡೆದ ಎಸ್ಟಿ ಪಟ್ಟಿಗೆ ಹಲವು ಜಾತಿಗಳನ್ನು ಸೇರಿಸಲು ಮುಂದಾಗಿರುವುದು ವಿಷಾದನೀಯ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಅನ್ಯ ಜಾತಿಗಳನ್ನು ಸೇರಿಸಿ ನಮ್ಮ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಅಂಬೇಡ್ಕರ್ ಅವರ ಸಂವಿಧಾನ ಪ್ರಕಾರ ಪರಿಶಿಷ್ಟ ಪಂಗಡಕ್ಕೆ ಸೇರುವ ಸವಲತ್ತು ಬೇರೆ ಬಲಾಢ್ಯ ಜಾತಿಗೆ ನೀಡಿದರೆ ನಮಗೆ ಅನ್ಯಾಯ ಆಗುತ್ತದೆ ಎಂದು ಕಿಡಿಕಾರಿದರು.
ತಾಪಂ ಮಾಜಿ ಸದಸ್ಯ ಪುಟ್ಟರಾಜು ಮಾತನಾಡಿ ಒಂದು ಕೆಜಿ ಅಕ್ಕಿಯಲ್ಲಿ ಹತ್ತು ಜನ ಊಟ ಮಾಡಲು ಅಸಾಧ್ಯವಾದ ವಿಚಾರ. ಆದರೆ, ಸರ್ಕಾರ ಒಂದು ಕೆಜಿ ಅಕ್ಕಿಗೆ ನೂರು ಜನರನ್ನು ಹಂಚಲು ಹೊರಟಿದೆ. ಇದರಲ್ಲಿ ನ್ಯಾಯ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಎಸ್ಟಿ ಪಟ್ಟಿಗೆ ಬೇರೆ ಯಾವ ಜಾರಿಯನ್ನು ಸೇರಿಸುವುದು ಸರಿಯಲ್ಲ ಎಂದರು.
ಇನ್ನು ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.ಈ ಪ್ರತಿಭಟನೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಜಿ.ಎನ್. ಅಡವೀಶಯ್ಯ, ಗೌರವಾಧ್ಯಕ್ಷ ಎ.ನರಸಿಂಹಮೂರ್ತಿ, ಸದಸ್ಯರಾದ ನಿಟ್ಟೂರು ಕೃಷ್ಣಮೂರ್ತಿ, ಜಿ.ಎಲ್.ರಂಗನಾಥ್, ಚೇತನ್ ನಾಯಕ್, ಹೇರೂರು ನಾಗರಾಜು, ಹೊಸಹಳ್ಳಿ ರಂಗನಾಥ್ ಇತರರು ಹಾಜರಿದ್ರು.




