Bengaluru ಥಣಿಸಂದ್ರದಲ್ಲಿ ರೌಡಿಶೀಟರ್ ಪವನ್ ಕುಮಾರ್ ಮೇಲೆ ಗ್ಯಾಂಗ್ ದಾಳಿ ನಡೆಸಿ ತಾಯಿ ಕಣ್ಣೆದುರೇ ಬರ್ಬರ ಹತ್ಯೆ…

Bengaluru ರಾಜಧಾನಿಯಲ್ಲಿ ಮತ್ತೊಮ್ಮೆ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆತ್ತ ತಾಯಿಯ ಕಣ್ಣೆದುರೇ ರೌಡಿಶೀಟರ್ನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಆತಂಕ ಸೃಷ್ಟಿಸಿದೆ. ಬುಧವಾರ ಸಂಜೆ ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್ನಲ್ಲಿ ಈ ದುರ್ಘಟನೆ ನಡೆದಿದೆ.
ಮೃತನನ್ನು 25 ವರ್ಷದ ರೌಡಿಶೀಟರ್ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಮನೆ ಮುಂದೆ ನಿಂತಿದ್ದ ವೇಳೆ ಮೂರು ಬೈಕ್ಗಳಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿಕೊಂಡೇ ದಾಳಿ ನಡೆಸಿದ್ದಾರೆ.
ಮಚ್ಚು ಹಾಗೂ ಲಾಂಗ್ಗಳಂತಹ ಮಾರಕಾಸ್ತ್ರಗಳನ್ನು ಬಳಸಿಕೊಂಡು ಕೆಲವೇ ಕ್ಷಣಗಳಲ್ಲಿ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ತಾಯಿ ಕಣ್ಣೆದುರೇ ನಡೆದ ಕ್ರೂರ ಹತ್ಯೆ
ದಾಳಿ ವೇಳೆ ಪವನ್ನ ತಾಯಿ ಕೋಮಲ ಮಗನನ್ನು ರಕ್ಷಿಸಲು ಮುಂದಾದರೂ ದುಷ್ಕರ್ಮಿಗಳು ಆಕೆಯನ್ನು ತಳ್ಳಿಹಾಕಿ ಹತ್ಯೆ ನಡೆಸಿದ್ದಾರೆ. “ನನ್ನ ಮುಂದೆಯೇ ಮಗನನ್ನು ಕೊಂದರು” ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.
ಜೈಲಿನಿಂದ ಹೊರಬಂದು ಹೊಸ ಜೀವನ ಆರಂಭಿಸಿದ್ದ ಪವನ್
ಪವನ್ ಕುಮಾರ್ ಹಿಂದೆ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ A5 ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದನು.
ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಸಾಮಾನ್ಯ ಜೀವನ ನಡೆಸಲು ಯತ್ನಿಸುತ್ತಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಕುಟುಂಬದವರು ಒಂದೂವರೆ ತಿಂಗಳ ಹಿಂದೆ ಬೇಕರಿ ಅಂಗಡಿ ಆರಂಭಿಸಲು ಸಹ ಸಹಾಯ ಮಾಡಿದ್ದರು.
ಇದನ್ನು ಓದಿ : Namma Metro ಪ್ರಯಾಣಿಕರಿಗೆ ಗುಡ್ ನ್ಯೂಸ್ – ಪ್ರಯಾಣ ಇನ್ನೂ ಸುಲಭ!

ಹಿಂದೆ ನಡೆದ ಕಪಿಲ್ ಕೊಲೆ ಪ್ರಕರಣದ ಪ್ರತೀಕಾರವಾಗಿ ಈ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪವನ್ ಕೆಲ ದಿನಗಳ ಹಿಂದೆಯೇ ತನ್ನ ಮೇಲೆ ದಾಳಿ ಸಂಭವಿಸಬಹುದು ಎಂದು ತಾಯಿಗೆ ಹೇಳಿದ್ದನೆಂಬ ಮಾಹಿತಿ ಹೊರಬಂದಿದೆ.
ಹೀಗಾಗಿ ಹಳೆಯ ದ್ವೇಷವೇ ಈ ಕ್ರೂರ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಗುರುತು ಪತ್ತೆ ಮಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ.
ಇದನ್ನು ನೋಡಿ : AUTO ACCIDENT | ಕೋತಿಯನ್ನು ತಪ್ಪಿಸಲು ಹೋಗಿ ಭೀಕರ ಅಪಘಾತ ಓರ್ವ ವ್ಯಕ್ತಿ ಸಾವು




