‘The Kerala Story 2 ’ ಸಿನಿಮಾಗೆ ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ. ಲವ್ ಜಿಹಾದ್ ಕಥಾವಸ್ತು ವಿವಾದ, ಸೆನ್ಸಾರ್ ಪ್ರಮಾಣಪತ್ರ ಪ್ರಶ್ನೆ, ಅರ್ಜಿಗಳ ವಿಚಾರಣೆ ಮುಗಿಯುವ ತನಕ ಬಿಡುಗಡೆ ಇಲ್ಲ.

ವಿವಾದಾತ್ಮಕ ಕಥಾವಸ್ತುವಿನಿಂದಲೇ ಗಮನ ಸೆಳೆದಿದ್ದ ‘ The Kerala Story 2 ’ ಸಿನಿಮಾ ಇದೀಗ ಕಾನೂನು ಅಡೆತಡೆಗೆ ಸಿಲುಕಿದೆ. ಫೆಬ್ರವರಿ 27ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಚಿತ್ರತಂಡಕ್ಕೆ ದೊಡ್ಡ ಹೊಡೆತವಾಗಿದೆ.
ಫೆಬ್ರವರಿ 25ರಂದು ನಡೆದ ವಿಚಾರಣೆಯಲ್ಲಿ ಚಿತ್ರದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ಸಂಪೂರ್ಣವಾಗಿ ವಿಚಾರಣೆ ನಡೆಸುವ ತನಕ ಸಿನಿಮಾ ಬಿಡುಗಡೆ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ.
ಅರ್ಜಿಗಳಲ್ಲಿನ ಆರೋಪಗಳನ್ನು ಸಂಪೂರ್ಣವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ಸತಿಪತಿಯಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ!

ಟೀಸರ್ ಬಳಿಕ ಹೆಚ್ಚಾದ ವಿವಾದ
ಚಿತ್ರದ ಟೀಸರ್ ಬಿಡುಗಡೆಯಾದ ತಕ್ಷಣವೇ ಕೇರಳದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಕೆಲವು ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಸಿನಿಮಾ ರಾಜ್ಯವನ್ನು ತಪ್ಪಾಗಿ ಚಿತ್ರಿಸುತ್ತದೆ ಎಂದು ಆರೋಪಿಸಿದರು.
ವಿಶೇಷವಾಗಿ ‘ಲವ್ ಜಿಹಾದ್’ ಎಂಬ ಸಂವೇದನಾಶೀಲ ವಿಷಯವನ್ನು ಆಧಾರವಾಗಿಸಿಕೊಂಡಿರುವ ಕಥೆ ಸಮಾಜದಲ್ಲಿ ಅಶಾಂತಿ ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಚಿತ್ರಕ್ಕೆ ಪ್ರಮಾಣಪತ್ರ ನೀಡಿದ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ (CBFC) ಕ್ರಮವನ್ನೂ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೂರು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜಿದಾರರು ಸಿನಿಮಾ ಬಿಡುಗಡೆಯಾದರೆ ಕೋಮು ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ ಎಂದು ವಾದಿಸಿದ್ದು, ಸಮಾಜದ ಶಾಂತಿಗೆ ಧಕ್ಕೆಯಾಗಬಹುದು ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ವಿಚಾರಣೆ ವೇಳೆ ನಿರ್ಮಾಪಕರು ವಿದೇಶಿ ವಿತರಣೆ ಹಕ್ಕುಗಳು ಈಗಾಗಲೇ ಮಾರಾಟವಾಗಿರುವುದರಿಂದ ಬಿಡುಗಡೆ ಮುಂದೂಡಿದರೆ ದೊಡ್ಡ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ವಾದಿಸಿದರು.
ಆದರೂ ಎಲ್ಲಾ ವಾದಗಳನ್ನು ಸಮಗ್ರವಾಗಿ ಆಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಅಂತಿಮ ನಿರ್ಧಾರ ಹೊರಬರುವ ತನಕ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿಲ್ಲ.
ಇದನ್ನು ನೋಡಿ : GUBBI|ದೇಶದಲ್ಲೇ ರೈಲ್ವೇ ಮೆಗಾ ಕೋಚಿಂಗ್ ಬಗ್ಗೆ ಸೋಮಣ್ಣ ಮಾಹಿತಿ | V SOMANNA




