ನಾಳೆ ರಾಜ್ಯಾದ್ಯಂತ KSRTC ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ: ನೌಕರರಿಂದ ಬೆಂಗಳೂರು ಚಲೋ.

ರಾಜ್ಯದ ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರವರಿ 19ರಂದು ‘ಬೆಂಗಳೂರು ಚಲೋ’ ಹೋರಾಟಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಳೆದ ಬಾರಿ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರ ನಿಧನದ ಹಿನ್ನೆಲೆಯಲ್ಲಿ ‘ಬೆಂಗಳೂರು ಚಲೋ’ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಬೃಹತ್ ಮೆರವಣಿಗೆ
ಫೆಬ್ರವರಿ 19ರಂದು ಬೆಂಗಳೂರಿನ Freedom Park ನಲ್ಲಿ ಸಾವಿರಾರು ನೌಕರರು ಜಮಾಯಿಸಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮುಂದಿನ ಹೋರಾಟದ ಹಾದಿಯನ್ನು ಘೋಷಿಸುವ ನಿರೀಕ್ಷೆಯಿದೆ.
ಬಸ್ ಸಂಚಾರ ಸಂಪೂರ್ಣ ಸ್ಥಗಿತ
ಪ್ರತಿಭಟನೆಯ ಬೆನ್ನಲ್ಲೇ ಫೆಬ್ರವರಿ 20ರಿಂದ KSRTC ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಕೆಲಸಕ್ಕೆ ಗೈರಾಗುವ ಸಾಧ್ಯತೆ ಹೆಚ್ಚಿದೆ.
ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಇದನ್ನು ಓದಿ : ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು
ಸರ್ಕಾರದ ಕಠಿಣ ಎಚ್ಚರಿಕೆ
ಸಾರಿಗೆ ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದೆ. ಅಗತ್ಯವಿದ್ದರೆ ‘ಎಸ್ಮಾ’ (Essential Services Maintenance Act) ಜಾರಿಗೊಳಿಸುವುದು ಅಥವಾ ವೇತನ ಕಡಿತದಂತಹ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಾರಿಗೆ ನೌಕರರ ಬೇಡಿಕೆಗಳೇನು?
*ವೇತನಬಾಕಿ ಪಾವತಿ: ಕಳೆದ 38 ತಿಂಗಳ ವೇತನದ ಹಿಂಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು .
*ವೇತನ ಪರಿಷ್ಕರಣೆ: 1-1-2024ಕ್ಕೆ ಅನ್ವಯವಾಗುವಂತೆ ನೂತನ ವೇತನ ಶ್ರೇಣಿ ಜಾರಿಗೊಳಿಸಬೇಕು.
*ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡಬೇಕು.
*ಕೆಲಸದ ಅವಧಿಯಲ್ಲಿ ಅಧಿಕಾರಿಗಳಿಂದ ಕಾರ್ಮಿಕರಿಗೆ ನೀಡಲಾಗುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು.

ನೌಕರರ ವಿರುದ್ಧ ಶಿಸ್ತುಕ್ರಮ
ಇನ್ನು, ಫೆ.19 ರಂದು ಬೆಂಗಳೂರು ಚಲೋ ಹೋರಾಟದಲ್ಲಿ ಭಾಗಿಯಾಗುವ ನೌಕರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಆದೇಶ ಹೊರಡಿಸಿದ್ದಾರೆ.
ಫೆ.19 ನೌಕರರು ತಮ್ಮ ದೈನಂದಿನ ಕರ್ತವ್ಯಕ್ಕೆ ಗೈರು ಹಾಜರಾದರೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ಸಾಮಾನ್ಯ ತತ್ವದನ್ವಯ ದಿನದ ವೇತನವನ್ನು ಕಡಿತಗೊಳಿಸುವುದರ ಜತೆಗೆ ಆಡಳಿತವರ್ಗವು ಅನಧಿಕೃತವಾಗಿ ಗೈರು ಹಾಜರಾದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನು ನೋಡಿ : TUMAKURU ಗುಳೂರು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಬೆರಳು ಕಟ್ ಆಗಿದ್ದ ಕೇಸ್- ವರದಿ ಬೆನ್ನಲ್ಲೇ ದಾಖಲಾಯ್ತು FIR




