Tirupati : ಲಡ್ಡು ಪಡೆಯಲು ಇನ್ಮುಂದೆ ಟೋಕನ್ ಬೇಕಿಲ್ಲ.

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಕೋಟ್ಯಂತರ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ ಸಿಹಿ ಸುದ್ದಿಯೊಂದನ್ನು ನೀಡಿದೆ.
ಇನ್ಮುಂದೆ ಲಡ್ಡು ಪ್ರಸಾದ ಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಲಡ್ಡು ವಿತರಣಾ ಪ್ರಕ್ರಿಯೆಯನ್ನು ಟಿಟಿಡಿ ಮತ್ತಷ್ಟು ಸರಳ ಮತ್ತು ಸುಲಭಗೊಳಿಸಿದೆ.
Tirupati – ಏನಿದು ಹೊಸ ವ್ಯವಸ್ಥೆ?
ಇದುವರೆಗೂ ಹೆಚ್ಚುವರಿ ಲಡ್ಡು ಪ್ರಸಾದ ಬೇಕಾದರೆ ಭಕ್ತರು ಮೊದಲು ಬ್ಯಾಂಕ್ ಅಥವಾ ನಿರ್ದಿಷ್ಟ ಕೌಂಟರ್ಗಳಲ್ಲಿ ಹಣ ಪಾವತಿಸಿ ಟೋಕನ್ ಪಡೆಯಬೇಕಿತ್ತು. ನಂತರ ಆ ಟೋಕನ್ ಹಿಡಿದು ಲಡ್ಡು ವಿತರಣಾ ಕೌಂಟರ್ಗೆ ಹೋಗಿ ಮತ್ತೆ ಸರತಿ ಸಾಲಿನಲ್ಲಿ ನಿಂತು ಪ್ರಸಾದ ಪಡೆಯಬೇಕಾದ ಪರಿಸ್ಥಿತಿ ಇತ್ತು. ಈ ಪ್ರಕ್ರಿಯೆಯಿಂದ ಭಕ್ತರಿಗೆ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು.
ಇದೀಗ TTD ಜಾರಿಗೊಳಿಸಿರುವ ನೂತನ ವ್ಯವಸ್ಥೆಯಂತೆ, ಲಡ್ಡು ಕೌಂಟರ್ಗಳಲ್ಲೇ ನೇರವಾಗಿ ಹಣ ಪಾವತಿಸಿ ತಕ್ಷಣ ಲಡ್ಡು ಪ್ರಸಾದ ಪಡೆಯಬಹುದಾಗಿದೆ.
ಇದನ್ನು ಓದಿ : ಕಿರುತೆರೆಯಲ್ಲೂ ದಾಖಲೆ ಬರೆದ Kantara ಚಾಪ್ಟರ್ 1..!

UPI ಮೂಲಕ ಲಡ್ಡು ಪಡೆಯುವ ಅವಕಾಶ
ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತು ನೀಡಿರುವ ಟಿಟಿಡಿ, ಲಡ್ಡು ವಿತರಣಾ ಕೌಂಟರ್ಗಳಲ್ಲಿ UPI ಹಾಗೂ QR Code ಮೂಲಕ ಹಣ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಭಕ್ತರು ಫೋನ್ ಪೇ, ಗೂಗಲ್ ಪೇ ಸೇರಿದಂತೆ ವಿವಿಧ ಡಿಜಿಟಲ್ ಪಾವತಿ ಮಾಧ್ಯಮಗಳ ಮೂಲಕ ನಿಗದಿತ ಮಿತಿಯೊಳಗೆ ಬೇಕಾದಷ್ಟು ಲಡ್ಡುಗಳಿಗೆ ಹಣ ಪಾವತಿಸಿ ತಕ್ಷಣವೇ ಪ್ರಸಾದ ಪಡೆಯಬಹುದು. ನಗದು ಪಾವತಿಗೂ ಅವಕಾಶ ಕಲ್ಪಿಸಲಾಗಿದೆ.
ಭಕ್ತರ ಪರದಾಟಕ್ಕೆ ಮುಕ್ತಿ
ಹಳೆಯ ಪದ್ಧತಿಯಲ್ಲಿ ಟೋಕನ್ಗೆ ಒಂದು ಕ್ಯೂ ಮತ್ತು ಲಡ್ಡು ಪಡೆಯಲು ಮತ್ತೊಂದು ಕ್ಯೂನಲ್ಲಿ ನಿಲ್ಲಬೇಕಾಗುತ್ತಿತ್ತು. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳೊಂದಿಗೆ ಬರುವ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಟಿಟಿಡಿಯ ಈ ಹೊಸ ನಿರ್ಧಾರದಿಂದ ಭಕ್ತರ ಸಮಯ ಮತ್ತು ಶ್ರಮ ಎರಡೂ ಉಳಿಯಲಿದ್ದು, ಸುಗಮವಾಗಿ ಶ್ರೀವಾರಿ ಲಡ್ಡು ಪ್ರಸಾದ ಕೈಸೇರಲಿದೆ.

ಇದನ್ನು ನೋಡಿ : ಗ್ರಾಮದ ರೈತರಿಗೆ ಇದೆಂಥಾ ಅನ್ಯಾಯ.. ಅಕ್ರಮ ಖಾತೆ ಮಾಡಿಕೊಂಡು ಮಹಾಮೋಸ




