Chamarajanagara : ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ 11 ಹಸುಗಳ ನಿಗೂಢ ಸಾವಿನಿಂದ ರೈತರು ತೀವ್ರ ಆತಂಕಕ್ಕೀಡಾಗಿದ್ದಾರೆ.

Chamarajanagara : ಈಗಾಗಲೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಜಾನುವಾರುಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಮತ್ತೊಂದು ಆತಂಕ ಎದುರಾಗಿದೆ.
ಚಾಮರಾಜನಗರದಲ್ಲಿ ಹಸುಗಳ ಸರಣಿ ಸಾವು:
ಇದೀಗ ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು ಸಂಭವಿಸಿದ್ದು, ಕೇವಲ 2 ದಿನಗಳಲ್ಲಿ ಬರೋಬ್ಬರಿ 11 ಗೋವುಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಜಾನುವಾರುಗಳಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಹಸುಗಳನ್ನು ಕಳೆದುಕೊಂಡ ಮಾಲೀಕರು ಕಣ್ಣೀರಿಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಿನ್ನೆ ಪರಮಶಿವ ಎಂಬುವವರಿಗೆ ಸೇರಿದ 8 ಹಸುಗಳಲ್ಲಿ 6 ಹಸುಗಳು ಜಮೀನಿನ ಪಕ್ಕದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಕಾಡು ಪ್ರಾಣಿಗಳ ಬಳಿಕ ಮತ್ತೊಂದು ಸಂಕಷ್ಟ
ಬೆಳಗ್ಗೆ ಮೇವು ಹಾಕಲು ಜಮೀನಿಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಚೈತ್ರಾ ಹಾಗೂ ಪಶು ವೈದ್ಯಾಧಿಕಾರಿ ಸಿದ್ದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವತಿ ಅಪಘಾತದಲ್ಲಿ ದಾರುಣ ಸಾವು.!

ಮೇಲ್ನೋಟಕ್ಕೆ ವಿಷಪೂರಿತ ಆಹಾರ ಅಥವಾ ವಿಷಪೂರಿತ ನೀರು ಸೇವಿಸಿದ್ದರಿಂದ ಹಸುಗಳು ಮೃತಪಟ್ಟಿರಬಹುದೆಂಬ ಅಂದಾಜು ವ್ಯಕ್ತವಾಗಿದೆ. ಈ ವೇಳೆ 2 ಹಸುಗಳು ನಾಪತ್ತೆಯಾಗಿರುವುದು ಕೂಡ ಗಮನಕ್ಕೆ ಬಂದಿದೆ.
ಈ ಘಟನೆ ಮಾಸುವ ಮುನ್ನವೇ, ಇದೇ ಹನೂರು ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಮತ್ತೇ 5 ಹಸುಗಳು ನಿಗೂಢವಾಗಿ ಸಾವನ್ನಪ್ಪಿವೆ. ಗ್ರಾಮದ ತಂಗವೇಲು ಎಂಬುವವರಿಗೆ ಸೇರಿದ ಹಸುಗಳು ಮೃತಪಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗೋವುಗಳ ಸಾವು ಬೆನ್ನಲ್ಲೇ ಆಡಳಿತದ ವಿರುದ್ಧ ರೈತರ ಆಕ್ರೋಶ
ಜೀವನೋಪಾಯಕ್ಕೆ ಆಸರೆಯಾಗಿದ್ದ ಹಸುಗಳನ್ನು ಕಳೆದುಕೊಂಡ ಮಾಲೀಕರು ಕಣ್ಣೀರಾಕ್ತಿದ್ದು, “ಇನ್ನು ನಮ್ಮ ಬದುಕು ಹೇಗೆ?” ಎಂದಿದ್ದು, ಹಸುಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ, ಹಸುಗಳ ಸರಣಿ ಸಾವು ಹಾಗೂ ಆಡಳಿತದ ನಿರ್ಲಕ್ಷ್ಯ ಆರೋಪಗಳು ಚಾಮರಾಜನಗರ ಜಿಲ್ಲೆಯಲ್ಲಿ ರೈತರ ಆತಂಕ ಮತ್ತು ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿವೆ.
MUST WATCH : ತುಮಕೂರಿನಲ್ಲಿ ಮತ್ತೆ ಬೈಪಾಸ್ ವಿರೋಧಿ ಕಿಚ್ಚು- ಫೆ.8ರಂದು ಬೃಹತ್ ಹೋರಾಟ ನಡೆಸಲು ಸಿದ್ಧತೆ




