
KARWAR NEWS : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಪ್ರಸಿದ್ಧ ಕಾನೂರು ಜಲಪಾತಕ್ಕೆ ಪ್ರವಾಸ ಹೋಗಿದ್ದ ಹಳಿಯಾಳದ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಜಲಪಾತ ದಲ್ಲಿ ನೀರುಪಾಲಾದ ದುರ್ಘಟನೆ ನಡೆದಿದೆ. ಸುಹೇಲ್ ಸೈಯದ್ ಅಲಿ ಶೇಖ್ (21) ಎಂಬ ಯುವಕ ಈ ದುರಂತದಲ್ಲಿ ಬಲಿಯಾಗಿದ್ದು, ಶೋಧ ಕಾರ್ಯಗಳು ಮುಂದುವರೆದಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾದ ಸುಹೇಲ್, ತನ್ನ ಸಹಪಾಠಿಗಳಾದ ನಾಲ್ವರು ವಿದ್ಯಾರ್ಥಿಗಳು ಹಾಗೂ ನಾಲ್ವರು ವಿದ್ಯಾರ್ಥಿನಿಯರೊಂದಿಗೆ ಒಟ್ಟು 8 ಜನರ ತಂಡವಾಗಿ ಕಾನೂರು ಜಲಪಾತಕ್ಕೆ ಬಂದಿದ್ದರು. ಜಲಪಾತದ ಮುಂದೆ ಫೋಟೋಶೂಟ್ ನಡೆಸುವಾಗ ಅಚಾನಕ್ ಕಾಲು ಜಾರಿ ಬಿದ್ದು, ಸುಹೇಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಯಲ್ಲಾಪುರ ಉಪವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಹರಗಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಹಯೋಗದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.




