Chitradurga Accident : ಗಣಿಯೊಂದರಲ್ಲಿ ಲಾರಿ (Lorry) ಡಿಕ್ಕಿ ಹೊಡೆದು ಸೂಪರ್ವೈಸರ್ (Supervisor) ಸಾವನ್ನಪ್ಪಿದ ಘಟನೆ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ (Bheemasamudra) ಗ್ರಾಮದಲ್ಲಿ ನಡೆದಿದೆ.

Chitradurga Accident : ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿರುವ ಗಣಿಯೊಂದರಲ್ಲಿ ಲಾರಿ ಡಿಕ್ಕಿ ಹೊಡೆದು ಸೂಪರ್ವೈಸರ್ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೃತರನ್ನು ಚಂದ್ರಶೇಖರ್ (49) ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯ ಪರಿಣಾಮ ಚಂದ್ರಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಅಪಘಾತದ ವಿಷಯವನ್ನು ತಕ್ಷಣ ಕುಟುಂಬಸ್ಥರಿಗೆ ತಿಳಿಸದೆ ಕಂಪನಿ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.
ಸುರಕ್ಷತೆ ಇಲ್ಲ ಎಂಬ ಗಂಭೀರ ಆರೋಪ
ಇನ್ನು ಗಣಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲ. ಕಂಪನಿ ಕೇವಲ ತನ್ನ ಆದಾಯಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದು, ಕಾರ್ಮಿಕರ ಜೀವಕ್ಕೆ ಬೆಲೆ ನೀಡುತ್ತಿಲ್ಲ. ಇದೇ ಕಾರಣಕ್ಕೆ ಇಂತಹ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ : Chitradurga : ಮುರುಘಾಶ್ರೀಗೆ ಮತ್ತೊಮ್ಮೆ ಎದುರಾದ ಸಂಕಷ್ಟ!

ಪ್ರಕರಣ ಮರೆಮಾಚುವ ಶಂಕೆ
ಅಪಘಾತದ ಬಳಿಕ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ, ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಕರಣದ ಕುರಿತು ಸಮಗ್ರ ಹಾಗೂ ನ್ಯಾಯಸಮ್ಮತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ಸಂಬಂಧಿಕರು ಮತ್ತು ಗಣಿ ಉದ್ಯೋಗಿಗಳು ಆಗ್ರಹಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ
ಸದ್ಯ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಈ ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
MUST WATCH : ಲೋಕಾ ಬಲೆಗೆ ಬಿದ್ದ ತುಮಕೂರಿನ PSI – ಲಂಚ ಪಡೆದು ತಗ್ಲಾಕೊಂಡ್ರಾ ಸಬ್ ಇನ್ಸ್ಪೆಕ್ಟರ್




