Tumakuru ತಾಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಾಲಯದ ಹುಂಡಿ ಹಣ ಎಣಿಕೆ ವೇಳೆ ಭಕ್ತರು ಬರೆದಿರುವ ಚಿತ್ರವಿಚಿತ್ರ ಹರಕೆ ಪತ್ರಗಳು ಪತ್ತೆಯಾಗಿವೆ.

Tumakuru ನಮ್ಮ ಜನರ ಭಕ್ತಿ ನೋಡಿದರೆ ನಗಬೇಕೋ ಅಥವಾ ಅಚ್ಚರಿ ಪಡಬೇಕೋ ಅನ್ನುವಂತಿದೆ. ದೇವರಿಗೆ ಹರಕೆ ಕಟ್ಟೋದು, ಪ್ರದಕ್ಷಿಣೆ ಹಾಕೋದು ಎಲ್ಲವೂ ಸಾಮಾನ್ಯ.
ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತರು ದೇವರಿಗೆ ಬೇಡಿಕೆ ಪತ್ರಗಳನ್ನೇ ಹುಂಡಿಗೆ ಹಾಕುವ ಟ್ರೆಂಡ್ ಶುರುಮಾಡಿದ್ದಾರೆ.
ತುಮಕೂರು ತಾಲೂಕಿನ ಪ್ರಸಿದ್ಧ ಹೆತ್ತೇನಹಳ್ಳಿ ಮಾರಮ್ಮ ದೇವಾಲಯದ ಹುಂಡಿ ಹಣ ಎಣಿಕೆ ವೇಳೆ, ಭಕ್ತರು ಬರೆದಿರುವ ಚಿತ್ರವಿಚಿತ್ರ ಹರಕೆ ಪತ್ರಗಳು ಪತ್ತೆಯಾಗಿವೆ.
ಹೆತ್ತೇನಹಳ್ಳಿ ಗ್ರಾಮದ ಶಕ್ತಿ ದೇವತೆ ಎಂದೇ ಪ್ರಸಿದ್ಧವಾಗಿರುವ ಮಾರಮ್ಮ ದೇವಾಲಯದಲ್ಲಿ ಇತ್ತೀಚೆಗೆ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ.
ಈ ವೇಳೆ ಹಣದ ಜೊತೆ, ಭಕ್ತರು ಬರೆದು ಹಾಕಿದ ಅಚ್ಚರಿಯ ಹರಕೆ ಪತ್ರಗಳು ಸಿಕ್ಕಿದ್ದು, ದೇವಾಲಯದ ಸಿಬ್ಬಂದಿಯೇ ಶಾಕ್ ಆಗಿದ್ದಾರೆ.

ತಾಯಂದಿರ ಹರಕೆ ಮಗಳು ಪ್ರೀತಿಯಿಂದ ದೂರವಾಗಲಿ!
ಹರಕೆ ಪತ್ರಗಳಲ್ಲಿ,
“ನನ್ನ ಮಗಳು ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅವನು ಮರೆತು ಓದಿನ ಕಡೆ ಗಮನ ಹರಿಸುವಂತೆ ಮಾಡಮ್ಮ” ಎಂದು ತಾಯಿಯೊಬ್ಬರು ಬರೆಯುವ ಮೂಲಕ ಹರಕೆ ಕಟ್ಟಿಕೊಂಡಿದ್ದಾರೆ.
ಇನ್ನೊಬ್ಬ ತಾಯಿ,
“ನನ್ನ ಮಗಳು ಮನೆಯಲ್ಲಿ ಹಠ ಮಾಡುತ್ತಾಳೆ, ಸರಿಯಾಗಿ ಓದುತ್ತಿಲ್ಲ. ನಮ್ಮ ಮಾತು ಕೇಳುವಂತೆ ಮಾಡಮ್ಮ” ಎಂದು ಬೇಡಿಕೆ ಇಟ್ಟಿದ್ದಾರೆ.

ಯುವತಿಯರ ಬೇಡಿಕೆ: ಮದುವೆ ಬೇಡ, ಹಣ ವಾಪಾಸ್ ಬರಲಿ!
ಇಷ್ಟಕ್ಕೇ ಸೀಮಿತವಲ್ಲ…
ಯುವತಿಯೊಬ್ಬಳು,
“ಅವನಿಗೆ ಯಾವುದೇ ಕಾರಣಕ್ಕೂ ಕಂಕಣ ಭಾಗ್ಯ ಕೂಡಿ ಬರಬಾರದು. ನನ್ನಿಂದ ಪಡೆದ ಹಣವನ್ನು ವಾಪಾಸ್ ಕೊಡಿಸುವಂತೆ ಮಾಡಮ್ಮ” ಎಂದು ದೇವಿಗೆ ಹರಕೆ ಪತ್ರ ಬರೆದಿರುವುದು ಕಂಡುಬಂದಿದೆ.

ದೇವಾಲಯದ ಸಿಬ್ಬಂದಿಯೇ ಅಚ್ಚರಿ!
ಹಣ ಹಾಕಲು ಇರುವ ಹುಂಡಿಯನ್ನು, ಭಕ್ತರು ತಮ್ಮ ವೈಯಕ್ತಿಕ ಸಮಸ್ಯೆಗಳ ಪತ್ರಪೆಟ್ಟಿಗೆಯಂತೆ ಬಳಸಿರುವುದು ಕಂಡುಬಂದಿದೆ.
ಈ ವಿಚಿತ್ರ ಹರಕೆ ಪತ್ರಗಳನ್ನು ನೋಡಿ ದೇವಾಲಯದ ಆಡಳಿತ ಸಿಬ್ಬಂದಿ ಹಾಗೂ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಶಕ್ತಿ ದೇವತೆ ಹೆತ್ತೇನಹಳ್ಳಿ ಮಾರಮ್ಮಗೆ ಭಕ್ತರು ಬರೆದಿರುವ ಈ ವಿಚಿತ್ರ ಹರಕೆ ಪತ್ರಗಳು ನಗು ತರಿಸುವಂತಿದ್ದು, ಭಕ್ತಿಯ ಮತ್ತೊಂದು ವಿಚಿತ್ರ ಮುಖವನ್ನು ತೋರಿಸಿವೆ.




