
ತುಮಕೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಸಡಗರ ಜೋರಾಗಿದೆ. ಎರಡನೇ ದಿನವಾದ ಇಂದು ಕೂಡ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ- ಹೋವ ಹವನ ನಡೆಸಲಾಯ್ತು. ಕಳೆದ ಒಂದು ವರ್ಷದಿಂದ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿಯಾಗಿ ದಸರಾವನ್ನು ನಡೆಸಿಕೊಂಡು ಬರಲಾಗ್ತಿದ್ದು, ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗ್ತಿದೆ.

ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಧಾರ್ಮಿಕ ಮಂಟಪ ನಿರ್ಮಾಣ ಮಾಡಲಾಗಿದ್ದು, ಮಂಟಪದಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ದೇವಿಗೆ ನಿತ್ಯ ನವರಾತ್ರಿ ಅಂಗವಾಗಿ ಒಂದೊಂದು ಅವತಾರದಲ್ಲಿ ದೇವಿಗೆ ಅಲಂಕಾರ ಮಾಡಲಾಗ್ತಿದೆ. ಎರಡನೇ ದಿನವಾದ ಇಂದು ದೇವಿಗೆ ಬ್ರಹ್ಮಚಾರಿಣಿ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಿಯ ಅಲಂಕಾರ ಕಂಡು ಭಕ್ತರು ಮೂಖ ವಿಸ್ಮಿತರಾಗ್ತಿದ್ದಾರೆ. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಹೋಮ- ಹವನ ನಡೆಸಲಾಗಿದ್ದು, ಗೃಹ ಸಚಿವ ಪರಮೇಶ್ವರ್ ದಂಪತಿ, ಡಿಸಿ ಶುಭಕಲ್ಯಾಣ್, ಜಿಲ್ಲಾ ಪಂಚಾಯ್ತಿ ಸಿಇಒ ಜಿ ಪ್ರಭು ದಂಪತಿ, ಎಸ್ಪಿ ಅಶೋಕ್ ವೆಂಕಟ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ರು.

ಈ ವೇಳೆ ಮಾತನಾಡಿದ ಸಚಿವ ಪರಮೇಶ್ವರ್, ರಾಜ್ಯವು ಸುಭೀಕ್ಷವಾಗಿರಲಿ, ಉತ್ತಮ ಮಳೆ ಬೆಳೆ ಆಗಲಿ ಎಂದು ವಿಶೇಷ ಪೂಜೆ ಮಾಡಲಾಗಿದ್ದು, ತಾಯಿ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ಪರಂ ಆಶಿಸಿದ್ರು.ಇನ್ನು ಇಂದು ಎರಡನೇ ದಿನವಾದ ಬ್ರಹ್ಮಚರಣಿ ಅಂಗವಾಗಿ ಮಹಿಳೆಯರು ಹಾಗೂ ಪುರುಷರು ಕೆಂಪು ವಸ್ತ್ರದಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.

ಇನ್ನು ತುಮಕೂರು ದಸರಾ ಅಂಗವಾಗಿ ಮೊದಲ ಬಾರಿಗೆ ಹೆಲಿಕಾಫ್ಟರ್ ರೈಡ್ ಹಾಗೂ ಹಾಟ್ ಏರ್ ಬಲೂನ್ನನ್ನು ಆಯೋಜನೆ ಮಾಡಲಾಗಿದೆ. ಅಂತೂ ದಸರಾ ನೆಪದಲ್ಲಿ ಹೆಲೆಕಾಫ್ಟರ್ ರೈಡ್ ಅವಕಾಶ ಸಿಕ್ಕಿದೆ ಎಂದ ತುಮಕೂರಿಗರು 3900 ರೂಪಾಯಿ ಕೊಟ್ಟು ಹೆಲಿಕಾಫ್ಟರ್ ರೈಡ್ ಮಾಡಿ ಖುಷಿ ಪಟ್ಟರು. ಇತ್ತ ಹೊರ ರಾಜ್ಯ, ದೇಶದಲ್ಲಿ ಮಾತ್ರ ಇರುವ ಹಾಟ್ ಏರ್ ಬಲೂನ್ ನನ್ನು ನಗರದ ಸರ್ವೋದಯ ಕಾಲೇಕು ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದು, ಜನರು ಮುಗಿಬಿದ್ದು ಹಾಟ್ ಏರ್ ಬಲೂನ್ನಲ್ಲಿ ಪ್ರಯಾಣ ಮಾಡಿ ಹೊಸ ಅನುಭವವನ್ನು ಪಡೆದುಕೊಂಡರು.

ತುಮಕೂರು ದಸರಾ ಅಂಗವಾಗಿ ನಗರದಲ್ಲಿ ಸಂಭ್ರಮ ಕಳೆಗಟ್ಟಿದ್ದು, ಒಂದ್ಕಡೆ ನಾನಾ ಪೂಜಾ ಕೈಂಕರ್ಯಗಳು ನಡೆಯುತ್ತಿದ್ರೆ, ಮತೊಂದ್ಕಡೆ ಹೆಲಿಕಾಫ್ಟರ್, ಹಾಟ್ ಏರ್ ಬಲೂನ್, ಅಂಬಾರಿ ಬಸ್ ಏರಿ ಜನರು ಹೊಸ ಅನುಭವ ಪಡೆದುಕೊಂಡು, ಎಂಜಾಯ್ ಮಾಡಿದ್ರು.




