IPL ನ 19ನೇ ಸೀಸನ್ ಆರಂಭಕ್ಕೂ ಮುನ್ನ ರಿಜಿಸ್ಟರ್ ಅವೇಲೇಬಲ್ ಪ್ಲೇಯರ್ ಪೂಲ್ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಿನಿ ಹರಾಜಿಗಾಗಿ ಒಟ್ಟು 1390 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಹರಾಜಿಗೆ ಆಯ್ಕೆಯಾಗಿದ್ದು ಕೇವಲ 359 ಆಟಗಾರರು ಮಾತ್ರ. ಇವರಲ್ಲಿ ಕೇವಲ 77 ಆಟಗಾರರು ಮಾತ್ರ ತಂಡಗಳಿಗೆ ಮಾರಾಟವಾಗಿದ್ದು, ಉಳಿದ1313 ಆಟಗಾರರು ಅವಕಾಶ ವಂಚಿತರಾಗಿದ್ದರು.
RAPP ಲಿಸ್ಟ್ ಪ್ರಕಟ
ಈಗ ಅವಕಾಶ ವಂಚಿತರಾದ ಆಟಗಾರರ ಪೈಕಿ 1307 ಆಟಗಾರರನ್ನು ಒಳಗೊಂಡ RAPP ಲಿಸ್ಟ್ನ್ನು (Register Available Player Pool) ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ. ಬದಲಿ ಆಟಗಾರರ ಆಯ್ಕೆಗಾಗಿ ಈ ಪಟ್ಟಿ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಏನಿದು RAPP ಲಿಸ್ಟ್?
RAPP ಎಂದರೆ IPL ಗಾಗಿ ನೋಂದಾಯಿಸಿಕೊಂಡಿದ್ದರೂ ಹರಾಜಿನಲ್ಲಿ ಮಾರಾಟವಾಗದ ಲಭ್ಯವಿರುವ ಆಟಗಾರರ ಅಧಿಕೃತ ಪಟ್ಟಿ.
ಐಪಿಎಲ್ ಅವಧಿಯಲ್ಲಿ ಯಾವುದೇ ತಂಡದ ಆಟಗಾರ ಗಾಯಗೊಂಡರೆ ಅಥವಾ ಹೊರಗುಳಿದರೆ, ಬದಲಿ ಆಟಗಾರರನ್ನು ಈ RAPP ಲಿಸ್ಟ್ನಿಂದಲೇ ಆಯ್ಕೆ ಮಾಡಬೇಕು ಎಂಬ ನಿಯಮವನ್ನು ಬಿಸಿಸಿಐ ಜಾರಿಗೆ ತಂದಿದೆ.
RAPP ಲಿಸ್ಟ್ನ ಪ್ರಮುಖ ನಿಯಮಗಳು
- ಫ್ರಾಂಚೈಸಿಗಳು ಬದಲಿ ಆಟಗಾರರನ್ನು ಕೇವಲ RAPP ಲಿಸ್ಟ್ನಿಂದಲೇ ಆಯ್ಕೆ ಮಾಡಬೇಕು
- ಆಟಗಾರನನ್ನು ಅವರ ಮೂಲ ಹರಾಜಿನ ಮೀಸಲು ಬೆಲೆಗೆ ಕಡಿಮೆ ಮೊತ್ತಕ್ಕೆ ಆಯ್ಕೆ ಮಾಡುವಂತಿಲ್ಲ
- RAPP ಲಿಸ್ಟ್ನಲ್ಲಿರುವ ಆಟಗಾರರನ್ನು ನೆಟ್ ಬೌಲರ್ಗಳಾಗಿ ಬಳಸಿಕೊಳ್ಳಬಹುದು
- ಆದರೆ, ಬೇರೆ ಫ್ರಾಂಚೈಸಿ ಬದಲಿ ಆಟಗಾರನಾಗಿ ಆಯ್ಕೆ ಮಾಡಲು ಮುಂದಾದರೆ ತಕ್ಷಣವೇ ಬಿಡುಗಡೆ ಮಾಡಬೇಕು
ಉದಾಹರಣೆಗೆ, ಈ ಬಾರಿ ಸ್ಟೀವ್ ಸ್ಮಿತ್ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದರೆ, ಅವರನ್ನು ಅದಕ್ಕಿಂತ ಕಡಿಮೆ ಮೊತ್ತಕ್ಕೆ ಬದಲಿ ಆಟಗಾರನಾಗಿ ಸಹಿ ಮಾಡಿಸಲು ಅವಕಾಶವಿಲ್ಲ.

ಇದನ್ನು ನೋಡಿ : ಮಾದಾರ ಮಹಾಸಭಾ ಘಟಕ ರಚನೆ ಅಧ್ಯಕ್ಷರಾಗಿ ದೇವರಾಜು ಆಯ್ಕೆ
RAPP ಲಿಸ್ಟ್ನಲ್ಲಿ ಸ್ಥಾನ ಪಡೆದಿರುವ ಪ್ರಮುಖ ವಿದೇಶಿ ಆಟಗಾರರು
2 ಕೋಟಿ ರೂ. ಮೂಲ ಬೆಲೆ:
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಜೇಕ್ ಫ್ರೇಸರ್-ಮೆಕ್ಗುರ್ಕ್ (ಆಸ್ಟ್ರೇಲಿಯಾ), ರೀಸ್ ಟೋಪ್ಲಿ (ಇಂಗ್ಲೆಂಡ್), ಜೇಮೀ ಸ್ಮಿತ್ (ಇಂಗ್ಲೆಂಡ್)
1.5 ಕೋಟಿ ರೂ. ಮೂಲ ಬೆಲೆ:
ರಹಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಟಿಮ್ ಸೈಫರ್ಟ್ (ನ್ಯೂಝಿಲೆಂಡ್)
1 ಕೋಟಿ ರೂ. ಮೂಲ ಬೆಲೆ:
ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್), ಫಝಲ್ಹಕ್ ಫಾರೂಕಿ (ಅಫ್ಘಾನಿಸ್ತಾನ್)
RAPP ಲಿಸ್ಟ್ನಲ್ಲಿರುವ ಪ್ರಮುಖ ಭಾರತೀಯ ಆಟಗಾರರು
ಉಮೇಶ್ ಯಾದವ್, ನವದೀಪ್ ಸೈನಿ, ಚೇತನ್ ಸಕರಿಯಾ, ಸಂದೀಪ್ ವಾರಿಯರ್, ಮಾಯಾಂಕ್ ಅಗರ್ವಾಲ್, ದೀಪಕ್ ಹೂಡಾ, ಕೆ.ಎಸ್. ಭರತ್, ಯಶ್ ಧುಲ್, ಅಭಿನವ್ ಮನೋಹರ್, ಅಥರ್ವ ಟೈಡೆ, ಮನನ್ ವೋಹ್ರಾ, ಮಹಿಪಾಲ್ ಲೋಮ್ರೋರ್, ಕಮಲೇಶ್ ನಾಗರಕೋಟಿ ಮತ್ತು ರಾಜವರ್ಧನ್ ಹಂಗರ್ಗೇಕರ್ ಸೇರಿದಂತೆ ಹಲವು ಅನುಭವೀ ಹಾಗೂ ಯುವ ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
IPL ನಲ್ಲಿ ಅವಕಾಶ ಇನ್ನೂ ಜೀವಂತ
ಹರಾಜಿನಲ್ಲಿ ತಂಡ ಸಿಗದಿದ್ದರೂ, RAPP ಲಿಸ್ಟ್ನಲ್ಲಿ ಸ್ಥಾನ ಪಡೆದಿರುವ ಆಟಗಾರರಿಗೆ ಐಪಿಎಲ್ನಲ್ಲಿ ಆಡುವ ಅವಕಾಶ ಇನ್ನೂ ಜೀವಂತವಾಗಿದೆ.
ಗಾಯ, ಲಭ್ಯತೆಯ ಸಮಸ್ಯೆ ಅಥವಾ ತಂಡದ ತಂತ್ರದ ಆಧಾರದಲ್ಲಿ ಈ ಆಟಗಾರರು ಯಾವುದೇ ಕ್ಷಣದಲ್ಲಾದರೂ ಐಪಿಎಲ್ಗೆ ಪ್ರವೇಶಿಸುವ ಸಾಧ್ಯತೆ ಇದೆ.

ಇದನ್ನು ಓದಿ : Metro ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್




