
BANGALORE : ಕೇಂದ್ರ ಸರ್ಕಾರ ಹಲವಾರು ವಸ್ತುಗಳ ಜಿಎಸ್ಟಿ ಕಡಿತಗೊಳಿಸಿ ಜನಸಾಮಾನ್ಯರಿಗೆ ತಾತ್ಕಾಲಿಕ ನಿಟ್ಟುಸಿರು ಕೊಟ್ಟಿದ್ದರೂ, ರಾಜ್ಯದಲ್ಲಿ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಹೌದು..ಇಂದಿನಿಂದ ದೇಸಿ ಹಾಲಿನ ಪ್ಯಾಕೆಟ್ ದರ ಹೆಚ್ಚಾಗಿದ್ದು, ಇದೀಗ ಸಾರಿಗೆ ಪ್ರಯಾಣಿಕರಿಗೂ ಶಾಕ್ ನೀಡುವ ಸುದ್ದಿಯೊಂದು ಹೊರಬಿದ್ದಿದೆ.
KSRTC ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರಗಳು ವರ್ಷಕ್ಕೊಮ್ಮೆ ಏರಿಕೆ ಆಗುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆಯ ಮಾದರಿಯಲ್ಲಿ ಈಗ ಸಾರಿಗೆ ದರಗಳಿಗೂ ನಿಯಮಿತ ಬದಲಾವಣೆ ತರಲು ಸರ್ಕಾರ ಕ್ರಮ ಕೈಗೊಂಡಿದೆ. 1989ರ ಕರ್ನಾಟಕ ಮೋಟಾರು ವಾಹನ ನಿಯಮದ ಅಡಿಯಲ್ಲಿ “ಸಾರಿಗೆ ದರ ನಿಯಂತ್ರಣ ಸಮಿತಿ”ಯನ್ನು ರಚಿಸಲಾಗಿದೆ. ಈ ಸಮಿತಿ ಪ್ರತಿ ವರ್ಷ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಲು ಶಿಫಾರಸು ನೀಡಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ದುಬಾರಿಯಾಗುವ ಭೀತಿ ಮೂಡಿದೆ.
ಇನ್ನು ಈ ಸಮಿತಿ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರನ್ನು ಒಳಗೊಂಡಿದ್ದು. ಕಾಲಕಾಲಕ್ಕೆ ದರ ಪರಿಷ್ಕರಣೆ ಮಾಡಲಿದೆ. ವಿವಿಧ ಸರ್ಚಾರ್ಜ್, ಶುಲ್ಕಗಳನ್ನು ವಿಧಿಸಲು ಈ ಸಮಿತಿ ಸೂಚಿಸಬಹುದು. ದಿನೇ ದಿನೇ ಇಂಧನ ದರ ಹೆಚ್ಚುತ್ತಿರುವ ಹಿನ್ನೆಲೆ ಲಾಂಗ್ ಟರ್ಮ್ ನಲ್ಲಿ ಏರಿಕೆ ಬದಲು ಆಗಾಗ ಏರಿಕೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.




