
BANGALORE :ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ನೋಟಿಸ್ನಂತೆ ವಿಚಾರಣೆಗೆ ಹಾಜರಾದ ಸಚಿವರು, ತನಿಖಾಧಿಕಾರಿಗಳ ಮುಂದೆ ತಮ್ಮ ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತಾಗಿ ದಾಖಲಾತಿಗಳ ಸಮೇತ ಸ್ಪಷ್ಟನೆ ನೀಡಿದ್ದಾರೆ.
ಸತತ ಎರಡು ಗಂಟೆಗಳ ಕಾಲ ನಡೆದ ಈ ವಿಚಾರಣೆಯಲ್ಲಿ, ಸಚಿವರ ಆಸ್ತಿ ಮೂಲಗಳ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗಿದೆ. ವಿಚಾರಣೆಯ ಬಳಿಕ, ಅಗತ್ಯವಿದ್ದರೆ ಮತ್ತೊಮ್ಮೆ ಹಾಜರಾಗುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ. ಜಮೀರ್ ಅಹಮದ್ ಅವರ ಆಪ್ತರು ಹಾಗೂ ಸಂಬಂಧಿತ ವ್ಯಕ್ತಿಗಳ ಕಚೇರಿಗಳಲ್ಲಿಯೂ ಪರಿಶೀಲನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ನೋಟಿಸ್ ನೀಡುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ.
ಐಎಂಎ ಪೊಂಜಿ ಹಗರಣದ ತನಿಖೆ ನಡೆದ ವೇಳೆ ಜಾರಿ ನಿರ್ದೇಶನಾಲಯ ಆಗಸ್ಟ್ 2021 ರಲ್ಲಿ ಜಮೀರ್ ಖಾನ್ ಮೇಲೆ ದಾಳಿ ನಡೆಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಇಡಿ ನಂತರ ಎಸಿಬಿಯೊಂದಿಗೆ ಹಂಚಿಕೊಂಡಿದೆ. ಎಸಿಬಿ ನಿಷ್ಕ್ರಿಯಗೊಂಡ ನಂತರ, ಮುಂದಿನ ತನಿಖೆಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಯಿತು ಎಂದು ವರದಿ ಆಗಿದೆ. ಜಮೀರ್ ಅಹಮದ್ ಅವರ ನಿವಾಸ ಹಾಗೂ ಕಚೇರಿಗಳಲ್ಲಿ ದಾಳಿ ನಡೆಸಿತ್ತು. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು.




