
BELAGAVI : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಗ್ರಾಮಸ್ಥರು ತಡೆಹಿಡಿದು ಬೆಂಕಿ ಇಟ್ಟಿರುವ ಘಟನೆ ನಡೆದಿದೆ. ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್ ಕಡೆಗೆ ಸಾಗಿಸಲಾಗುತ್ತಿದ್ದ ಲಾರಿಯನ್ನು, ಖಚಿತ ಮಾಹಿತಿಯ ಮೇಲೆ ಸ್ಥಳೀಯರು ತಡೆದು ನಿಲ್ಲಿಸಿದ್ದಾರೆ.
ಇನ್ನು ಚಾಲಕನನ್ನು ವಾಹನದಿಂದ ಕೆಳಗೆ ಇಳಿಸಿ ಥಳಿಸಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿ ಪರಿಶೀಲನೆ ವೇಳೆ ಸುಮಾರು 7 ಕ್ವಿಂಟಾಲ್ ಗೋಮಾಂಸ ಸಾಗಿಸುತ್ತಿದ್ದು ಪತ್ತೆಯಾಗಿದೆ. ಇದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಲಾರಿಗೆ ಬೆಂಕಿ ಹಚ್ಚಿದ್ದಾರೆ.
ಸ್ಥಳಕ್ಕೆ ಕಾಗವಾಡ ಠಾಣೆ ಪೊಲೀಸರು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಅನಾಹುತವಾಗದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಎರಡು ಡಿಎಸ್ಪಿ, ನಾಲ್ಕು ಸಿಪಿಐ, ಎಂಟು ಪಿಎಸ್ಐ ಸೇರಿ 100ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.




