
ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಅವರಿಗೆ ಸರ್ಕಾರಿ ಅಧಿಕಾರಿಯ ಸೋಗಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನು ಕರೆ ಮಾಡಿ ವೈಯಕ್ತಿಕ ಮಾಹಿತಿ ಕದಿಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸುಧಾ ಮೂರ್ತಿ ಅವರ ಪರವಾಗಿ ಗಣಪತಿ ಎಂಬವರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 5ರಂದು ಕೇಂದ್ರ ದೂರಸಂಪರ್ಕ ಇಲಾಖೆ ಅಧಿಕಾರಿ ಎಂಬ ನಾಟಕವಾಡಿದ ವಂಚಕ, “ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲ. ಇದರೊಂದಿಗೆ ಅಶ್ಲೀಲ ವಿಡಿಯೋ ಪ್ರಸಾರವಾಗುತ್ತಿದೆ” ಎಂದು ಹೇಳುವ ಮೂಲಕ ವೈಯಕ್ತಿಕ ಮಾಹಿತಿ ಕೇಳಿದ್ದಾನೆ. ಮಾಹಿತಿ ನೀಡದಿದ್ದರೆ ಮೊಬೈಲ್ ನಂಬರ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂಬ ಹೆದರಿಕೆ ಮೂಡಿಸಿದ್ದಾನೆ.
ಸಂದೇಹಗೊಂಡು ದೂರವಾಣಿ ಸಂಖ್ಯೆಯನ್ನು ಟ್ರೂ ಕಾಲರ್ನಲ್ಲಿ ಪರಿಶೀಲಿಸಿದಾಗ ಅದು “Telecom Department” ಎಂದು ತೋರಿಸಿದ್ದುದರಿಂದ ವಂಚನೆ ಅನುಮಾನಿತವಾಗಿದೆ. ಈ ಕುರಿತು ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.




