Dharwad : ಧಾರವಾಡ ಜಿಲ್ಲೆಯ ಬೈಹಟ್ಟಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ..

Dharwad :ಹೆತ್ತವರು ಹೊಲದಲ್ಲಿ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಗ್ರಾಮಸ್ಥರ ತಕ್ಷಣದ ಸ್ಪಂದನೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ನಗರದಿಂದ ಸುಮಾರು 30 ಕಿಲೋಮೀಟರ್ ದೂರದ ಬೈಹಟ್ಟಿ ಗ್ರಾಮದ ಕೃಷಿ ಜಮೀನಿನಲ್ಲಿ, ಬೆಳಿಗ್ಗೆ ಮಗು ಜೋರಾಗಿ ಅಳುತ್ತಿರುವ ಶಬ್ದ ಕೇಳಿ ಹೊಲದಲ್ಲಿದ್ದ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ನಾಯಿ ಮಗುವಿನ ಕಾಲನ್ನು ಕಚ್ಚುತ್ತಿದ್ದ ದೃಶ್ಯ ಕಂಡು ಗ್ರಾಮಸ್ಥರು ತಕ್ಷಣ ಹಸ್ತಕ್ಷೇಪ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಇದನ್ನು ಓದಿ : ರೈಲ್ವೆಯಲ್ಲಿ 22,000 ಖಾಲಿ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!
ಕಾಲಿನ ಹೆಬ್ಬೆರಳಿಗೆ ಗಂಭೀರ ಗಾಯ
ನಾಯಿ ಕಚ್ಚಿದ ಪರಿಣಾಮ ಮಗುವಿನ ಎಡಗಾಲಿನ ಹೆಬ್ಬೆರಳನ್ನು ಸಂಪೂರ್ಣವಾಗಿ ಅಗಿದು ತಿಂದಿದೆ ಎಂದು ತಿಳಿದುಬಂದಿದೆ. ನೋವಿನಿಂದ ಮಗು ನಿರಂತರವಾಗಿ ಅಳುತ್ತಿದ್ದು ಗ್ರಾಮಸ್ಥರ ಗಮನ ಸೆಳೆಯಲು ಕಾರಣವಾಯಿತು.
ಮೊದಲು, ಆಶಾ ಕಾರ್ಯಕರ್ತರ ಸಹಾಯದಿಂದ ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂಸಿಆರ್ಐ (KMC RI) ಆಸ್ಪತ್ರೆಗೆ ದಾಖಲಿಸಲಾಗಿದೆ.

NICU ನಲ್ಲಿ ಚಿಕಿತ್ಸೆ
ಸುಮಾರು 2.6 ಕೆಜಿ ತೂಕದ ನವಜಾತ ಶಿಶು ಪ್ರಸ್ತುತ ಎನ್ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ರಕ್ಷಣೆ ದೊರೆತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಈ ಘಟನೆ ಕುರಿತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗುಂಜನ್ ಆರ್ಯ ಮಾಹಿತಿ ನೀಡಿದ್ದು, ಬೆಳಿಗ್ಗೆಯೇ ಮಗು ಹೊಲದಲ್ಲಿ ಪತ್ತೆಯಾಗಿದೆ ಎಂದು ದೃಢಪಡಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು, ಮಗುವನ್ನು ತ್ಯಜಿಸಿದ ತಾಯಿ ಮತ್ತು ಕುಟುಂಬದವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನು ನೋಡಿ : ನಾಳೆ ನಡೆದಾಡುವ ದೇವರ ಪುಣ್ಯಸ್ಮರಣೆ – ಸಿದ್ಧಗಂಗಾ ಮಠದಲ್ಲಿ ಹೇಗಿದೆ ಗೊತ್ತಾ ಸಿದ್ಧತೆ..!?




