Bengaluru : ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ತಾನೊಬ್ಬ ದೊಡ್ಡ ಉದ್ಯಮಿ ಎಂದು ನಂಬಿಸಿ, ಯುವತಿ ಮತ್ತು ಆಕೆಯ ಸ್ನೇಹಿತರಿಂದ 1.75 ಕೋಟಿ ರೂ. ವಂಚಿಸಿದ ಆರೋಪದಡಿ ವ್ಯಕ್ತಿಯೋರ್ವನ ವಿರುದ್ಧ ದೂರು ದಾಖಲಾಗಿದೆ.

Bengaluru : ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಪರಿಚಯವಾಗಿ ತಾನೊಬ್ಬ ದೊಡ್ಡ ಉದ್ಯಮಿ ಎಂದು ನಂಬಿಸಿ, ಯುವತಿ ಹಾಗೂ ಆಕೆಯ ಸ್ನೇಹಿತರಿಂದ ಸುಮಾರು 1.75 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಈಗಾಗಲೇ ವಿವಾಹಿತನಾಗಿದ್ದು, ತನ್ನ ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದಾನೆ ಎಂಬ ಸ್ಫೋಟಕ ವಿಚಾರ ತನಿಖೆಯಲ್ಲಿ ಹೊರಬಂದಿದೆ.
2024ರ ಮಾರ್ಚ್ನಲ್ಲಿ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಯುವತಿಗೆ ಆರೋಪಿ ಪರಿಚಯವಾಗಿದ್ದ.
ತಾನು 715 ಕೋಟಿ ಆಸ್ತಿ ಹೊಂದಿರುವ ಉದ್ಯಮಿ, ತಂದೆ ನಿವೃತ್ತ ತಹಶೀಲ್ದಾರ್ ಎಂದು ಹೇಳಿಕೊಂಡಿದ್ದ ಈತ,
ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದಾನೆ. ಅಲ್ಲದೆ, ಕೆಂಗೇರಿ ಬಳಿ ಮನೆಗೆ ಕರೆದುಕೊಂಡು ಹೋಗಿ ಮನೆಯವರನ್ನೂ ಪರಿಚಯಿಸಿದ್ದಾನೆ ಎನ್ನಲಾಗಿದೆ.
ಆಸ್ತಿ ಕೇಸ್ ನೆಪದಲ್ಲಿ ಹಣದ ಬೇಡಿಕೆ
ಆಮೇಲೆ ತನ್ನ ನಿಜ ಆಟ ಆರಂಭಿಸಿದ ಆರೋಪಿ, ಆಸ್ತಿ ಸಂಬಂಧ ಐಟಿ ಮತ್ತು ಕೋರ್ಟ್ ಕೇಸ್ ಇದೆ, ಬ್ಯಾಂಕ್ ಖಾತೆ ಸಮಸ್ಯೆಯಾಗಿದೆ ಎಂದು ಹೇಳಿ ಕೆಲವು ದಾಖಲೆಗಳು ಹಾಗೂ ಕೋರ್ಟ್ ಪ್ರತಿಗಳನ್ನು ತೋರಿಸಿದ್ದಾನೆ.
ಮೊದಲಿಗೆ ₹15,000 ಪಡೆದಿದ್ದು, ಬಳಿಕ ಯುವತಿಯ ಹೆಸರಲ್ಲಿ ಲೋನ್ ಮಾಡಿಸಿ,
ಆಕೆಯ ಸ್ನೇಹಿತರ ಬಳಿಯೂ ಸಾಲ ಪಡೆದು ಹಂತ ಹಂತವಾಗಿ ಒಟ್ಟು ₹1.75 ಕೋಟಿ ಸಂಗ್ರಹಿಸಿದ್ದಾನೆ ಎಂದು ದೂರಲಾಗಿದೆ.
ಒಮ್ಮೆ ಮಾತ್ರ ₹22 ಲಕ್ಷ ವಾಪಸ್ ಕೊಟ್ಟ ಆರೋಪಿ, ಉಳಿದ ಹಣ ನೀಡಲು ನಿರಾಕರಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಆರೋಪಿಯ ಹಿನ್ನೆಲೆ ಪರಿಶೀಲಿಸಿದಾಗ, ಈತ ಈಗಾಗಲೇ ಮದುವೆಯಾಗಿ ಮಗು ಹೊಂದಿದ್ದಾನೆ ಎಂಬ ಸತ್ಯ ಹೊರಬಂದಿದೆ.
ಇಷ್ಟೇ ಅಲ್ಲದೆ, ಮನೆಗೆ ಪರಿಚಯಿಸುವ ವೇಳೆ ತಾನು ತಾಳಿ ಕಟ್ಟಿದ ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದಾನೆ ಎಂಬುದು ಗೊತ್ತಾಗಿದೆ.
ಪೊಲೀಸ್ ದೂರು, ತನಿಖೆ ಮುಂದುವರಿಕೆ
ಮೋಸ ಹೋದ ವಿಚಾರ ತಿಳಿದ ಯುವತಿ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿಜಯ್ ರಾಜ್ ಗೌಡ, ಬೊರೇಗೌಡ, ಸೌಮ್ಯ ವಿರುದ್ಧ ಪ್ರಕರಣ ದಾಖಲಾಗಿದೆ.
ನಂತರ ಪ್ರಕರಣವನ್ನು ಕೆಂಗೇರಿ ಠಾಣೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




