Bagalkot : ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ ಎಂಬ ಮಾರುಕಟ್ಟೆ ಜೀವಗಳನ್ನು ಕಸಿದುಕೊಳ್ಳುತ್ತಲೇ ಇದೆ…

Bagalkot : ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ ಎಂಬ ಮಾರುಕಟ್ಟೆ ಜೀವಗಳನ್ನು ಕಸಿದುಕೊಳ್ಳುತ್ತಲೇ ಇದೆ. ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಚೌಡಯ್ಯ ನಗರದಲ್ಲಿ ಆನ್ಲೈನ್ ಬೆಟ್ಟಿಂಗ್ನ ಸಾಲದ ಸುಳಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ನೇಣು ಬಿಗಿದುಕೊಂಡು ಆತ್ಮಹತ್ಯೆ
ಮೃತ ಯುವಕನನ್ನು ರಮೇಶ್ ಬಂಟನೂರು (21) ಎಂದು ಗುರುತಿಸಲಾಗಿದ್ದು, ಅವರು ಜಮಖಂಡಿಯ ಖಾಸಗಿ ಕಾಲೇಜೊಂದರಲ್ಲಿ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರು. ಮನೆಯಲ್ಲೇ ನೇಣು ಬಿಗಿದುಕೊಂಡು ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ಆನ್ಲೈನ್ ಬೆಟ್ಟಿಂಗ್ಗೆ ತೀವ್ರವಾಗಿ ಅಲವಡಿಸಿಕೊಂಡಿದ್ದು, ಇದರಿಂದಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ಹಿಂದೆ ಆತನ ತಂದೆಯೇ ಎರಡು ಬಾರಿ ಸಾಲ ತೀರಿಸಿ ಮಗನನ್ನು ರಕ್ಷಿಸಿದ್ದರು.
ಇದನ್ನು ಓದಿ : Bidar|ಕಟ್ಟಡದ ಮೇಲಿಂದ ಬಿದ್ದು ಯುವಕ ದಾರುಣ ಸಾವು

ಮತ್ತೆ ಆನ್ಲೈನ್ ಬೆಟ್ಟಿಂಗ್ ಆಡಬಾರದೆಂದು ತಂದೆ ರಮೇಶ್ಗೆ ಬುದ್ಧಿವಾದ ಹೇಳಿದ್ದಾರೆ. ಇದೇ ವಿಚಾರವಾಗಿ ಮನನೊಂದ ಯುವಕ, ಆತ್ಮಹತ್ಯೆ ಎಂಬ ಅತಿದಾರುಣ ನಿರ್ಧಾರಕ್ಕೆ ಶರಣಾಗಿದ್ದಾನೆ ಎನ್ನಲಾಗಿದೆ.
ಪೊಲೀಸ್ ತನಿಖೆ ಮುಂದುವರಿಕೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಜಮಖಂಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಆತ್ಮಹತ್ಯೆಗೆ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಆನ್ಲೈನ್ ಬೆಟ್ಟಿಂಗ್ ಕೇವಲ ಹಣವನ್ನಷ್ಟೇ ಅಲ್ಲ, ಅಮೂಲ್ಯ ಜೀವಗಳನ್ನೂ ಕಸಿದುಕೊಳ್ಳುತ್ತಿದೆ. ಯುವಕರು ಮತ್ತು ಪೋಷಕರು ಎಚ್ಚರಿಕೆ ವಹಿಸುವುದು ಅತ್ಯಾವಶ್ಯಕ.
ಇದನ್ನು ನೋಡಿ : ಅಭಿವೃದ್ಧಿಗೆ ಕುಮಾರಸ್ವಾಮಿ ನೆರವು ಪಡೆದಿಲ್ವಾ ಶಿವಲಿಂಗೇಗೌಡಗೆ ಸವಾಲ್ ಹಾಕಿದ ರೇವಣ್ಣ




